ದೆಹಲಿ: ಆತಂಕಕಾರಿ ಮಟ್ಟದಲ್ಲಿ ವಾಯು ಮಾಲಿನ್ಯ ಏರಿಕೆಯಾಗುತ್ತಿರುವುದನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕ್ರಮಗಳ ಅನುಷ್ಠಾನದಲ್ಲಿ ವಿಳಂಬವನ್ನು ಗಮನಿಸಿರುವ ಸುಪ್ರೀಂ ಕೋರ್ಟ್, GRAP 4 ನಿರ್ಬಂಧಗಳನ್ನು ಜಾರಿಗೊಳಿಸಲು ತಕ್ಷಣವೇ ತಂಡಗಳನ್ನು ಸ್ಥಾಪಿಸುವಂತೆ ದೆಹಲಿ-ಎನ್‌ಸಿಆರ್ ರಾಜ್ಯಗಳಿಗೆ ಸೋಮವಾರ ಸೂಚಿಸಿದೆ.
ಈ ನಿರ್ಬಂಧಗಳು ವಾಯುಗುಣಮಟ್ಟ 450 ಕ್ಕಿಂತಲೂ ಕಡಿಮೆ ಇದ್ದರೂ ಸಹ ಜಾರಿಯಲ್ಲಿರಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾ. ಅಭಯ್ ಎಸ್ ಓಕಾ ಹಾಗೂ ಆಗಸ್ಟೀನ್ ಜಾರ್ಜ್ ಮಾಸಿಹ್ ಅವರಿದ್ದ ಪೀಠ, ಎಲ್ಲಾ ನಾಗರಿಕರು ಮಾಲಿನ್ಯ ಮುಕ್ತ ವಾತಾವರಣದಲ್ಲಿ ಬದುಕುವುದನ್ನು ಖಚಿತಪಡಿಸಿಕೊಳ್ಳುವುದು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಗಳ ಸಾಂವಿಧಾನಿಕ ಕರ್ತವ್ಯವಾಗಿದೆ ಎಂದು ಹೇಳಿದೆ.
"AQI ಮಟ್ಟ 450 ಕ್ಕಿಂತ ಕಡಿಮೆಯಿದ್ದರೂ ಸಹ ಮುಂದುವರಿಯಲು GRAP ಯ ಹಂತ 4 ರ ಅಡಿಯಲ್ಲಿ ನಾವು ನಿರ್ಬಂಧಗಳನ್ನು ನಿರ್ದೇಶಿಸುತ್ತೇವೆ" ಎಂದು ಪೀಠ ಹೇಳಿದೆ.
ಎಲ್ಲಾ ದೆಹಲಿ-ಎನ್‌ಸಿಆರ್ ರಾಜ್ಯಗಳು 12 ನೇ ತರಗತಿಯವರೆಗೆ ಭೌತಿಕ ತರಗತಿಗಳನ್ನು ನಡೆಸುವುದರ ಬಗ್ಗೆ ತಕ್ಷಣವೇ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಕೇಳಿಕೊಂಡಿದೆ ಮತ್ತು ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ 4 ರ ಅಡಿಯಲ್ಲಿ ನಿರ್ಬಂಧಗಳ ಉಲ್ಲಂಘನೆಗಾಗಿ ದೂರುಗಳನ್ನು ನೀಡಬಹುದಾದ ಯಾಂತ್ರಿಕ ವ್ಯವಸ್ಥೆಯನ್ನು ಸ್ಥಾಪಿಸಲು ನಿರ್ದೇಶಿಸಿದೆ.
ಸೋಮವಾರದಿಂದ GRAP 4ನೇ ಹಂತವನ್ನು ಜಾರಿಗೆ ತರಲಾಗಿದ್ದು, ಭಾರೀ ವಾಹನಗಳನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ದೆಹಲಿ ಸರ್ಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.
ವಕೀಲಯರ ಹೇಳಿಕೆಯನ್ನು ಆಲಿಸಿದ ನ್ಯಾಯಪೀಠ, "AQI ಮಟ್ಟವು ಅಪಾಯಕಾರಿ ಮಟ್ಟವನ್ನು ಮುಟ್ಟಿದ ಕ್ಷಣದಲ್ಲಿ GRAP ಹಂತಗಳನ್ನು ತಕ್ಷಣವೇ ಕಾರ್ಯಗತಗೊಳಿಸಬೇಕು. ಕೆಲವು ತುರ್ತು ಪ್ರಜ್ಞೆ ಇರಬೇಕು" ಎಂದು ಪೀಠ ಹೇಳಿದೆ.