ನವದೆಹಲಿ: ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ಐಎನ್‌ಎಸ್ ಅರಿಘಾತ್ ಬಳಸಿ ದೀರ್ಘ ವ್ಯಾಪ್ತಿ ಸಾಮರ್ಥ್ಯದ 'ಕೆ4 ಬ್ಯಾಲಿಸ್ಟಿಕ್ ಕ್ಷಿಪಣಿ'ಗಳ (ಎಸ್‌ಎಲ್‌ಬಿಎಂ) ಪರೀಕ್ಷಾರ್ಥ ಪ್ರಯೋಗವನ್ನು ಬುಧವಾರ ಯಶಸ್ವಿಯಾಗಿ ನಡೆಸಲಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.
'ಈ ಕ್ಷಿಪಣಿಗಳು 3500 ಕಿ.ಮೀ. ದೂರದ ಗುರಿಯನ್ನು ತಲುಪುವ ಸಾಮರ್ಥ್ಯ ಹೊಂದಿವೆ. ಪರೀಕ್ಷೆ ವೇಳೆ ಸಂಗ್ರಹಿಸಿರುವ ದತ್ತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ. ಸೇನೆಯ ಉನ್ನತ ಅಧಿಕಾರಿಗಳಿಗೆ ನಂತರ ಈ ಕುರಿತು ವಿವರಿಸಲಾಗುತ್ತದೆ' ಎಂದು ರಕ್ಷಣಾ ಮೂಲಗಳು ಹೇಳಿವೆ.
ಈ ಕ್ಷಿಪಣಿ ಕುರಿತು ಕೇಂದ್ರ ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ.
ಐಎನ್‌ಎಸ್ ಅರಿಘಾತ್ ಜಲಾಂತರ್ಗಾಮಿಯನ್ನು ಕೆಲ ತಿಂಗಳ ಹಿಂದೆಯಷ್ಟೆ ನೌಕಾಪಡೆಗೆ ಸೇರ್ಪಡೆ ಮಾಡಲಾಗಿತ್ತು. ಕೆ4 ಬ್ಯಾಲಿಸ್ಟಿಕ್ ಕ್ಷಿಪಣಿಗಳ ಪರೀಕ್ಷೆಗಳನ್ನು 2010ರಿಂದಲೂ ನಡೆಸಲಾಗುತ್ತಿದೆ.