ವಾಷಿಂಗ್ಟನ್/ ಫಿಲಿಡೆಲ್ಫಿಯಾ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಇನ್ನು ಐದು ದಿನಗಳು ಬಾಕಿ ಇದ್ದು, ದೇಶದಾದ್ಯಂತ ಚುನಾವಣೆ ಕಾವು ಪಡೆದಿದೆ. ಡೆಮಾಕ್ರಟಿಕ್ ಪಕ್ಷದ ಕಮಲಾ ಹ್ಯಾರಿಸ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
ಚುನಾವಣೆ ನವೆಂಬರ್ 5ರಂದು ನಡೆಯಲಿದೆ. ಬುಧವಾರದ ವೇಳೆಗೆ ಸುಮಾರು 6 ಕೋಟಿ ಮತದಾರರು ಇ-ಮೇಲ್ ಮೂಲಕ ಅಥವಾ ನೇರ ಮತದಾನದ ಮೂಲಕ ಮತ ಚಲಾವಣೆ ಮಾಡಿದ್ದಾರೆ. ಏಕಕಾಲದಲ್ಲಿ ಚುನಾವಣಾ ಪ್ರಚಾರ ಮತ್ತು ಮತದಾನ ಪ್ರಕ್ರಿಯೆ ನಡೆಯುವುದು ಅಮೆರಿಕ ಪ್ರಜಾಪ್ರಭುತ್ವದ ವೈಶಿಷ್ಟ್ಯವೆನಿಸಿದೆ.
ಶ್ವೇತಭವನದ ಗದ್ದುಗೆ ಏರಲು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಡುವೆ ನೇರಾನೇರಾ ಹಣಾಹಣಿ ಏರ್ಪಟ್ಟಿರುವುದನ್ನು ಇತ್ತೀಚಿನ ಸಮೀಕ್ಷೆಗಳು ತೆರೆದಿಟ್ಟಿವೆ.
ಸಿಎನ್‌ಎನ್ ನಡೆಸಿರುವ ಇತ್ತೀಚಿನ ಸಮೀಕ್ಷೆಗಳು, ಹ್ಯಾರಿಸ್ ಅವರಿಗೆ ಮಿಷಿಗನ್ ಮತ್ತು ವಿಸ್ಕಾನ್ಸಿನ್‌ನಲ್ಲಿ ಪರಿಸ್ಥಿತಿ ಕೊಂಚ ಅನುಕೂಲಕರವಾಗಿದೆ. ಆದರೆ, ಪೆನ್ಸಿಲ್ವೇನಿಯಾದಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದಾರೆ ಎಂದು ಹೇಳಿವೆ.
ಮಿಷಿಗನ್‌ನಲ್ಲಿ ಹ್ಯಾರಿಸ್ (ಶೇ 48) ಅವರು ಟ್ರಂಪ್ (ಶೇ 43)ಅವರಿಗಿಂತ ಹೆಚ್ಚು ಮತದಾರರ ಬೆಂಬಲ ಹೊಂದಿದ್ದಾರೆ. ಅಲ್ಲದೆ, ವಿಸ್ಕಾನ್ಸಿನ್‌ನಲ್ಲಿ ಹ್ಯಾರಿಸ್ ಅವರಿಗೆ ಶೇ 51ರಷ್ಟು ಮತ್ತು ಟ್ರಂಪ್ ಅವರಿಗೆ ಶೇ 45 ರಷ್ಟು ಮತದಾರರ ಬೆಂಬಲವಿದೆ. ಪೆನ್ಸಿಲ್ವೇನಿಯಾದಲ್ಲಿ ಇಬ್ಬರಿಗೂ ಶೇ 48 ರಷ್ಟು ಮತದಾರರ ಬೆಂಬಲ ವ್ಯಕ್ತವಾಗಿದೆ ಎಂದು ಇತ್ತೀಚಿನ ಮಾಹಿತಿಗಳು ಹೇಳಿವೆ.
'ಫಾಕ್ಸ್' ಸಮೀಕ್ಷೆ ಪ್ರಕಾರ, ಟ್ರಂಪ್ ಅವರು ಪೆನ್ಸಿಲ್ವೇನಿಯಾ ಮತ್ತು ನಾರ್ತ್ ಕರೊಲಿನಾದಲ್ಲಿ ಕಮಲಾ ಅವರಿಗಿಂತ ಕೇವಲ ಶೇ 1ರಷ್ಟು ಮತಗಳಿಂದ ಮುನ್ನಡೆಯಲ್ಲಿದ್ದಾರೆ. ಮಿಷಿಗನ್‌ನಲ್ಲಿ ಇಬ್ಬರೂ ಸಮಬಲ ಸಾಧಿಸಿದ್ದಾರೆ.
ಕಮಲಾ ಅವರು ಮಿಷಿಗನ್, ವಿಸ್ಕಾನ್ಸಿನ್ ಮತ್ತು ನೆವಡಾದಲ್ಲಿ ಮುಂದಿದ್ದಾರೆ ಎಂದು ವಾಷಿಂಗ್ಟನ್ ಪೋಸ್ಟ್ ಬುಧವಾರ ಹೇಳಿದೆ. ಇದೇ ವೇಳೆ, ಪೆನ್ಸಿಲ್ವೇನಿಯಾದಲ್ಲಿ ಅವರ ಮುನ್ನಡೆ ಕಳೆದ ವಾರದಿಂದ ಕುಸಿತ ಕಂಡಿದೆ. ಅರಿಜೋನಾ, ಜಾರ್ಜಿಯಾ ಮತ್ತು ನಾರ್ತ್ ಕರೊಲಿನಾದಲ್ಲಿ ಟ್ರಂಪ್ ಮುನ್ನಡೆ ಕಾಯ್ದುಕೊಂಡಿದ್ದಾರೆ ಎಂದು ಅದು ತಿಳಿಸಿದೆ.
ಶ್ವೇತಭವನದ ಗದ್ದುಗೆ ಹಿಡಿಯಲು ವಿಜಯಿ ಅಭ್ಯರ್ಥಿಯು 538 ಎಲೆಕ್ಟ್ರೋಲ್ ಮತಗಳಲ್ಲಿ 270 ಎಲೆಕ್ಟ್ರೋಲ್ ಮತಗಳನ್ನು ಪಡೆಯಬೇಕು. ಚುನಾವಣಾ ಫಲಿತಾಂಶಗಳನ್ನು ನಿರ್ಧರಿಸಲು ಜಾರ್ಜಿಯಾ, ಮಿಷಿಗನ್, ಅರಿಝೋನಾ, ಪೆನ್ಸಿಲ್ವೇನಿಯಾ, ನಾರ್ತ್ ಕೆರೊಲಿನಾ, ವಿಸ್ಕಾನ್ಸಿನ್ ಮತ್ತು ನೆವಾಡಾ ಈ ಏಳು ರಾಜ್ಯಗಳು ನಿರ್ಣಾಯಕ ಎನಿಸಿವೆ.
ಕಸ ಸಂಗ್ರಹಿಸುವ ಲಾರಿಯಲ್ಲಿ ಡೊನಾಲ್ಡ್ ಟ್ರಂಪ್. ಎಪಿ/ಪಿಟಿಐ ಚಿತ್ರ
ಕಸ ಸಾಗಣೆ ಟ್ರಕ್ ಏರಿದ ಟ್ರಂಪ್: ಬೈಡನ್ ಹ್ಯಾರಿಸ್‌ಗೆ ತಿರುಗೇಟು ವಿಸ್ಕಾನ್ಸಿನ್ ಗ್ರೀನ್‌ಬೇ ಪ್ರದೇಶದ ಚುನಾವಣಾ ರ್‍ಯಾಲಿಗೆ ಕಸ ಸಂಗ್ರಹಗಾರರ ಉಡುಪು ಧರಿಸಿ ಬಂದ ಡೊನಾಲ್ಡ್ ಟ್ರಂಪ್ ಅವರು 'ಕಮಲಾ ಹ್ಯಾರಿಸ್ ಅಧ್ಯಕ್ಷರಾಗಲು ಯೋಗ್ಯರಲ್ಲ' ಎಂದು ಹರಿಹಾಯ್ದರು. ಟ್ರಂಪ್ ಬೆಂಬಲಿಗರನ್ನು ಕಸಕ್ಕೆ ಹೋಲಿಸಿ ಅಧ್ಯಕ್ಷ ಜೋ ಬೈಡನ್ ನೀಡಿರುವ ಹೇಳಿಕೆಗೆ ಪ್ರತಿಯಾಗಿ ಟ್ರಂಪ್ ಅವರು ಹ್ಯಾರಿಸ್ ವಿರುದ್ಧ ತೀಕ್ಷ ವಾಗ್ದಾಳಿ ನಡೆಸಿದರು. ಚುನಾವಣಾ ರ್‍ಯಾಲಿಗೂ ಮುನ್ನ ಮಾತನಾಡಿದ ಅವರು 'ಅಮೆರಿಕದ ಜನತೆಯನ್ನು ನೀವು ಪ್ರೀತಿಸದಿದ್ದರೆ ದೇಶವನ್ನು ಮುನ್ನಡೆಸಲು ಸಾಧ್ಯವಿಲ್ಲ. ಇದು ಸತ್ಯ ಅಮರಿಕದ ಪ್ರಜೆಗಳನ್ನು ದ್ವೇಷಿಸಿದರೆ ನೀವು ಅಧ್ಯಕ್ಷರಾಗಲೂ ಸಾಧ್ಯವಿಲ್ಲ' ಎಂದು ಕಿಡಿಕಾರಿದರು. 'ಅಧ್ಯಕ್ಷೀಯ ಚುನಾವಣೆಯಲ್ಲಿ ನೀವು ಈಗಾಗಲೇ ಜನರಿಂದ ತಿರಸ್ಕೃತಗೊಂಡಿದ್ದೀರಿ' ಎಂದು ಕಮಲಾ ಅವರ ವಿರುದ್ಧ ಟ್ರಂಪ್ ಗುಡುಗಿದರು.