ಜೆರುಸಲೇಂ: ಗಾಜಾ ಹಾಗೂ ಲೆಬನಾನ್ನ 50ಕ್ಕೂ ಹೆಚ್ಚು ಸ್ಥಳಗಳನ್ನು ಗುರಿಯಾಗಿಸಿ ಶುಕ್ರವಾರ ರಾತ್ರಿ ವಾಯುದಾಳಿ ನಡೆಸಿರುವುದಾಗಿ ಇಸ್ರೇಲ್ ಸೇನೆ ಶನಿವಾರ ಹೇಳಿದೆ.
ಇಸ್ರೇಲ್ ಸೇನೆಯು ರಾತ್ರೋರಾತ್ರಿ ನಡೆಸಿದ ದಾಳಿಯಿಂದಾಗಿ, ಮಹಿಳೆಯರು, ಮಕ್ಕಳು ಸೇರಿದಂತೆ 14 ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿಯು ಹೇಳಿದೆ.
ಯುದ್ಧದಿಂದ ನಿರಾಶ್ರಿತರಾಗಿರುವವರಿಗಾಗಿ ಖಾನ್ ಯೂನಿಸ್ ನಗರದ ದಕ್ಷಿಣದಲ್ಲಿ ತೆರೆಯಲಾಗಿರುವ ಶಿಬಿರಗಳ ಮೇಲೆ ದಾಳಿ ನಡೆದಿದೆ. ಇಲ್ಲಿ 9 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾದ ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹ್ಮುದ್ ಬಸ್ಸಲ್ ತಿಳಿಸಿದ್ದಾರೆ.
ಮಾನವೀಯ ನೆರವು ಸಂಘಟನೆ 'ಪ್ಯಾಲೆಸ್ಟೀನಿಯಯನ್ ರೆಡ್ ಕ್ರೆಸೆಂಟ್' ಸಹ ದಾಳಿಯಲ್ಲಿ ಸಾಕಷ್ಟು ಮಂದಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ 'ನಾಸ್ಸೆರ್' ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದೆ.
ಲೆಬನಾನ್ನ ಕರಾವಳಿ ನಗರ ಟೈರ್ನಲ್ಲಿ ಇಸ್ರೇಲ್ ದಾಳಿಯಿಂದಾಗಿ ಕನಿಷ್ಠ 7 ಮಂದಿ ಮೃತಪಟ್ಟು, 46 ಜನರು ಗಾಯಗೊಂಡಿದ್ದಾರೆ. ಅಲ್ಲಿನ ಆರೋಗ್ಯ ಇಲಾಖೆ ಈ ಮಾಹಿತಿಯನ್ನು ಖಚಿತಪಡಿಸಿದೆ.
ಯುದ್ಧದಿಂದ ಸಾವು; 43,552ಕ್ಕೆ ಏರಿಕೆ
ಇಸ್ರೇಲ್ ಸೇನೆ ಪ್ರತಿದಾಳಿ ಆರಂಭಿಸಿದಾಗಿನಿಂದ ಮೃತಪಟ್ಟವರ ಸಂಖ್ಯೆ 43,552ಕ್ಕೆ ಏರಿಕೆಯಾಗಿದೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ.
ಹಮಾಸ್ ಬಂಡುಕೋರರು ಕಳೆದ ವರ್ಷ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಿದ್ದರು. ಅದರಿಂದಾಗಿ ಸುಮಾರು 1,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ದಾಳಿ ನಡೆಸುತ್ತಿದೆ.