ಬರ್ಲಿನ್: ಚೀನಾದ ಅಗ್ಗದ ಬೆಲೆಯ ಕಾರುಗಳ ಸ್ಪರ್ಧೆಯಿಂದ ಬೇಡಿಕೆಯ ಕೊರತೆ ಎದುರಿಸುತ್ತಿರುವ ಜರ್ಮನಿಯ ವಾಹನ ಕ್ಷೇತ್ರವು ತೀವ್ರವಾಗಿ ನಲುಗಿದ್ದು, ರಾಬರ್ಟ್ ಬಾಷ್ ಕಂಪನಿಯು 5,500 ಉದ್ಯೋಗಗಳ ಕಡಿತಕ್ಕೆ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.
ಕಾರುಗಳ ಬಿಡಿಭಾಗಗಳ ಪೂರೈಕೆದಾರ ಕಂಪನಿಯಾಗಿರುವ ಬಾಷ್, 2027ರ ಹೊತ್ತಿಗೆ ಕಂಪ್ಯೂಟರ್ ತಂತ್ರಾಂಶ ನೆರವು ನೀಡುವ ಕ್ರಾಸ್ ಡೊಮೈನ್ ವಿಭಾಗದಿಂದ 3,500 ಉದ್ಯೋಗಗಳ ಕತ್ತರಿಗೆ ಯೋಜನೆ ರೂಪಿಸಿದೆ.
ಇವರಲ್ಲಿ ಅರ್ಧದಷ್ಟು ನೌಕರರು ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಚಾಲಕ ರಹಿತ ವಾಹನ ವ್ಯವಸ್ಥೆಯುಳ್ಳ ಕಾರುಗಳಿಗೆ ಬೇಡಿಕೆ ಕ್ಷೀಣವಾಗಿರುವುದೇ ಕಂಪನಿಯ ಈ ಕ್ರಮಕ್ಕೆ ಕಾರಣ ಎಂದೆನ್ನಲಾಗಿದೆ.
2026ರ ಹೊತ್ತಿಗೆ ಹಿಲ್ಡ್‌ಶೈಮ್ ಘಟಕದಿಂದ 600 ಉದ್ಯೋಗಿಗಳನ್ನು ಹಾಗೂ 2032ರ ಹೊತ್ತಿಗೆ 750 ಉದ್ಯೋಗಗಳನ್ನು ವಜಾಗೊಳಿಸಲು ಕಂಪನಿ ಯೋಜನೆ ರೂಪಿಸಿದೆ. 2017ರಿಂದ 2030ರೊಳಗೆ ಸ್ಟಟ್‌ಗಾರ್ಟ್ ಬಳಿಯ ಷ್ಯೂಬಿಷ್ ಮ್ಯೂಂಡ್ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ 1,300 ಉದ್ಯೋಗಿಗಳನ್ನು ವಜಾಗೊಳಿಸಲು ಕಂಪನಿ ನಿರ್ಧರಿಸಿದೆ.
ಜರ್ಮನಿಯ ಕಾರು ತಯಾರಿಕಾ ಕಂಪನಿಗಳಿಗೆ ಜಾಗತಿಕ ಬೇಡಿಕೆ ಕುಸಿದ ಬೆನ್ನಲ್ಲೇ ಫೋಕ್ಸ್‌ವ್ಯಾಗನ್ ಕಂಪನಿಯು ಜರ್ಮನಿಯಲ್ಲಿನ ಘಟಕವನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ. ಮರ್ಸಿಡೀಸ್ ಕಂಪನಿಯೂ ವೆಚ್ಚ ಕಡಿತಕ್ಕೆ ಮುಂದಾಗಿದೆ.
ಬಾಷ್ ಕಂಪನಿಯ ಉದ್ಯೋಗ ಕಡಿತ ನಿರ್ಧಾರಕ್ಕೆ ಐಜಿ ಮೆಟಲ್ ಯೂನಿಯನ್ ವಿರೋಧ ವ್ಯಕ್ತಪಡಿಸಿದೆ. ಇದರ ವಿರುದ್ಧ ಎಲ್ಲಾ ಹಂತಗಳಲ್ಲೂ ಒಗ್ಗಟ್ಟನಿಂದ ಪ್ರತಿಭಟಿಸುವುದಾಗಿ ಸಂಘಟಕರು ಹೇಳಿದ್ದಾರೆ.