ನವದೆಹಲಿ: ಕೇಂದ್ರ ಸರ್ಕಾರವು, ದಂಗೆಕೋರರನ್ನು ನಿಯಂತ್ರಿಸುವ ಸಲುವಾಗಿ ಜನಾಂಗೀಯ ಹಿಂಸಾಚಾರ ಪೀಡಿತ ಮಣಿಪುರದ ಜಿರೀಬಾಮ್ ಜತೆಗೆ ಐದು ಜಿಲ್ಲೆಗಳಲ್ಲಿ ಇನ್ನೂ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳನ್ನು ಗುರುವಾರ ಮತ್ತೊಮ್ಮೆ ವಿವಾದಾತ್ಮಕ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ, 1958 (ಆಫ್‌ಸ್ಫಾ) ವ್ಯಾಪ್ತಿಗೆ ತಂದಿದೆ.
ಇತ್ತೀಚಿನ ಗೆಜೆಟ್ ಅಧಿಸೂಚನೆಯ ಪ್ರಕಾರ, ಭದ್ರತಾ ಪರಿಸ್ಥಿತಿಯ ಹೆಚ್ಚಿನ ಪರಿಶೀಲನೆಯು ಆಫ್‌ಸ್ಫಾ ಅಡಿಯಲ್ಲಿ ಇನ್ನೂ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿರುವ ಪ್ರದೇಶಗಳನ್ನು 'ಸಂಘರ್ಷಪೀಡಿತ ಪ್ರದೇಶ'ಗಳೆಂದು ಘೋಷಿಸಲು ಕಾರಣವಾಗಿದೆ. ಇದರೊಂದಿಗೆ, ಮಣಿಪುರದ 13 ಪೊಲೀಸ್ ಠಾಣೆಗಳ ವ್ಯಾಪ್ತಿಯ ಪ್ರದೇಶಗಳು ಮಾತ್ರ ಆಫ್‌ಸ್ಫಾ ವ್ಯಾಪ್ತಿಯಿಂದ ಹೊರಗುಳಿದಿವೆ.
'ಭದ್ರತೆಯ ಪರಿಶೀಲನೆಯ ನಂತರ, ಮಣಿಪುರದ 5 ಜಿಲ್ಲೆಗಳ ಆರು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಆಫ್‌ಸ್ಪಾ ಹೇರುವುದು ಭದ್ರತಾ ಪಡೆಗಳು ಭದ್ರತಾ ಪರಿಸ್ಥಿತಿ ಕಾಪಾಡಿಕೊಳ್ಳಲು ಮತ್ತು ಈ ಪ್ರದೇಶಗಳಲ್ಲಿ ದಂಗೆಕೋರ ಗುಂಪುಗಳ ಚಟುವಟಿಕೆ ನಿಯಂತ್ರಿಸಲು ಸಮರ್ಥನೀಯ ಕ್ರಮ ಎಂಬುದು ಕೇಂದ್ರ ಸರ್ಕಾರದ ನಿಲುವಾಗಿದೆ' ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಅಕ್ಟೋಬರ್ 1 ರಂದು, ಕೇಂದ್ರ ಸರ್ಕಾರವು 19 ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ಹೊರತುಪಡಿಸಿ ಇಡೀ ಮಣಿಪುರ ರಾಜ್ಯವನ್ನು ಆಫ್‌ಸ್ಫಾ ಕಾಯ್ದೆಯಡಿ 'ಸಂಘರ್ಷ ಪೀಡಿತ ಪ್ರದೇಶ'ವೆಂದು ಘೋಷಿಸಿತ್ತು.
ಸಿಆರ್‌ಪಿಎಫ್ ಹಿಂಪಡೆಯಲು ಕುಕಿ ಜೊ ಒತ್ತಾಯ
ಗುವಾಹಟಿ: ಮಣಿಪುರದ ಜಿರೀಬಾಮ್ ಜಿಲ್ಲೆಯಲ್ಲಿ ಸಿಆರ್‌ಪಿಎಫ್ ಜತೆಗೆ ನಡೆದ ಗುಂಡಿನ ಚಕಮಕಿಯಲ್ಲಿ ಹಮರ್ ಸಮುದಾಯಕ್ಕೆ ಸೇರಿದ 10 ಮಂದಿ ಬಂಡುಕೋರರ ಹತ್ಯೆಯಾಗಿರುವುದಕ್ಕೆ ಆಕ್ರೋಶಗೊಂಡಿರುವ ಕುಕಿ ಜೊ ಸಂಘಟನೆಗಳು ಸಂಘರ್ಷ ಪೀಡಿತ ರಾಜ್ಯದ ಕುಕಿ ಜನವಸತಿ ಪ್ರದೇಶಗಳಿಂದ ಸಿಆರ್‌ಪಿಎಫ್ ಅನ್ನು ಸಂಪೂರ್ಣ ಹಿಂಪಡೆಯಬೇಕು ಎಂದು ಒತ್ತಾಯಿಸಿವೆ. ಮಣಿಪುರಕ್ಕೆ ಹೆಚ್ಚುವರಿ 20 ಸಿಆರ್‌ಪಿಎಫ್ ತುಕಡಿಗಳನ್ನು ಕೇಂದ್ರ ಸರ್ಕಾರ ನಿಯೋಜಿಸಿದ ಬೆನ್ನಲ್ಲೇ ಈ ಒತ್ತಾಯ ಕೇಳಿಬಂದಿದೆ. ನ. 7 ರಂದು ಜಿರೀಬಾಮ್‌ನಲ್ಲಿ ಹಮರ್ ಸಮುದಾಯಕ್ಕೆ ಸೇರಿದ ಮಹಿಳೆಯೊಬ್ಬರ ಹತ್ಯೆ ಮತ್ತು ನ. 8ರಂದು ನಡೆದಿರುವ 10 ಯುವಕರ ಹತ್ಯೆಯ ಬಗ್ಗೆ ತನಿಖೆ ನಡೆಸಬೇಕು ಎಂದು ಜಿರೀಬಾಮ್ ಮತ್ತು ಫೆರ್ಜಾಲ್ ಜಿಲ್ಲೆಯ ಕುಕಿ ಜೊ ಸಂಘಟನೆಗಳ ವೇದಿಕೆಯಾದ ಸ್ಥಳೀಯ ಬುಡಕಟ್ಟು ಸಲಹಾ ಸಮಿತಿ (ಐಟಿಎಸಿ) ಹೇಳಿಕೆಯಲ್ಲಿ ಒತ್ತಾಯಿಸಿದೆ. ಆಂತರಿಕವಾಗಿ ಸ್ಥಳಾಂತರಗೊಂಡ ಮೈತೇಯಿ ಸಮುದಾದವರಿಗೆ ಆಶ್ರಯ ನೀಡಿದ್ದ ಪೊಲೀಸ್ ಠಾಣೆ ಮತ್ತು ಸಿಆರ್‌ಪಿಎಫ್ ಶಿಬಿರದ ಸಮೀಪ ಗುಂಡಿನ ದಾಳಿ ನಡೆಸಿದ್ದರಿಂದ ಪ್ರತಿದಾಳಿಯಲ್ಲಿ 10 ಮಂದಿ ಸಶಸ್ತ್ರ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಮಣಿಪುರ ಪೊಲೀಸರು ಹೇಳಿದ್ದಾರೆ. ಆದರೆ ಇದನ್ನು ಅಲ್ಲಗಳೆದಿರುವ ಕುಕಿ ಜೊ ಸಂಘಟನೆಗಳು 'ಕೊಲ್ಲಲ್ಪಟ್ಟವರು ಉಗ್ರಗಾಮಿಗಳಲ್ಲ ಹಮರ್ ಸಮುದಾಯಕ್ಕೆ ಸೇರಿದ ಗ್ರಾಮ ಸ್ವಯಂಸೇವಕರು. ಅವರು ತಮ್ಮ ಹಳ್ಳಿಗಳನ್ನು ಮೈತೇಯಿಗಳ ಸಂಭವನೀಯ ದಾಳಿಗಳ ವಿರುದ್ಧ ರಕ್ಷಿಸುತ್ತಿದ್ದರು' ಎಂದು ಪ್ರತಿಪಾದಿಸಿವೆ.