ಮುಂಬೈ: ಮಹಾರಾಷ್ಟ್ರದಲ್ಲಿ 'ಮಹಾಯುತಿ' ಮೈತ್ರಿಕೂಟದ ಹೊಸ ಸರ್ಕಾರ ಡಿಸೆಂಬರ್ 5ರಂದು ರಚನೆಯಾಗಲಿದೆ. ದೇವೇಂದ್ರ ಫಡಣವೀಸ್ ಅವರು ರಾಜ್ಯದ ಮುಂದಿನ ಮುಖ್ಯಮಂತ್ರಿ ಸರದಿಯ ಮುಂಚೂಣಿಯಲ್ಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದ ಉಸ್ತುವಾರಿ ಮುಖ್ಯಮಂತ್ರಿ ಏಕನಾಥ ಶಿಂದೆ, ದೇವೇಂದ್ರ ಫಡಣವೀಸ್ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರು ಮಹಾರಾಷ್ಟ್ರದ ಮುಂದಿನ ಸರ್ಕಾರ ರಚನೆ ಮತ್ತು ಅಧಿಕಾರ ಹಂಚಿಕೆಯ ಕುರಿತು ಚರ್ಚಿಸಿದ್ದರು.
ಶುಕ್ರವಾರ ನಡೆಯಬೇಕಿದ್ದ ಮಿತ್ರಪಕ್ಷಗಳ ಚುನಾಯಿತ ಶಾಸಕರ ಸಭೆ ರದ್ದಾಗಿದ್ದು, ಭಾನುವಾರ ನಡೆಯುವ ಸಂಭವವಿದೆ. ಇದರ ಬೆನ್ನಲ್ಲೇ ಉಸ್ತುವಾರಿ ಸಿ.ಎಂ ಏಕನಾಥ ಶಿಂದೆ ಅವರು ದಿಢೀರನೇ ಸತಾರಾ ಜಿಲ್ಲೆಯ ತನ್ನ ಹುಟ್ಟೂರಿಗೆ ತೆರಳಿದ್ದಾರೆ.
'ಡಿಸೆಂಬರ್ 5ರಂದು ಹೊಸ ಸರ್ಕಾರದ ಪ್ರಮಾಣ ವಚನ ಕಾರ್ಯಕ್ರಮ ನಡೆಯಲಿದೆ. ಎರಡು ಬಾರಿ ಮುಖ್ಯಮಂತ್ರಿ ಮತ್ತು ಒಂದು ಬಾರಿ ಉಪಮುಖ್ಯಮಂತ್ರಿಯಾಗಿರುವ ದೇವೇಂದ್ರ ಫಡಣವೀಸ್ ಅವರು ನೂತನ ಸರ್ಕಾರದ ಮುಖ್ಯಮಂತ್ರಿ ಹುದ್ದೆಗೆ ಮುಂಚೂಣಿಯಲ್ಲಿದ್ದಾರೆ' ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಆದರೆ ಹೊಸ ನಾಯಕನನ್ನು ಆಯ್ಕೆ ಮಾಡಲು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಯಾವಾಗ ನಡೆಯಲಿದೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ. ಮುಂದಿನ ಮುಖ್ಯಮಂತ್ರಿಯನ್ನು ಹೆಸರಿಸುವ ಬಿಜೆಪಿ ನಾಯಕತ್ವದ ನಿರ್ಧಾರವನ್ನು ಸಂಪೂರ್ಣವಾಗಿ ಬೆಂಬಲಿಸುವುದಾಗಿ ಶಿಂದೆ ಸ್ಪಷ್ಟಪಡಿಸಿದ್ದಾರೆ. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮುಖ್ಯಮಂತ್ರಿ ಸ್ಥಾನಕ್ಕೆ ಫಡಣವೀಸ್ ಅವರನ್ನು ಬೆಂಬಲಿಸಿದೆ.
ನವೆಂಬರ್ 20ರಂದು ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ 'ಮಹಾಯುತಿ' ಮೈತ್ರಿಕೂಟವು 235 ಸ್ಥಾನಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ನೇತೃತ್ವದ 'ಮಹಾ ವಿಕಾಸ ಅಘಾಡಿ' ಕೇವಲ 49 ಸ್ಥಾನಗಳನ್ನು ಗಳಿಸಿ ತೀವ್ರ ಮುಖಭಂಗ ಅನುಭವಿಸಿದೆ. ಚುನಾವಣೆ ಫಲಿತಾಂಶ ಪ್ರಕಟವಾಗಿ ವಾರ ಕಳೆದರೂ 'ಮಹಾಯುತಿ' ಒಕ್ಕೂಟದ ಸರ್ಕಾರ ರಚನೆಯಾಗಿಲ್ಲ. ನೂತನ ಮುಖ್ಯಮಂತ್ರಿ ಯಾರೆಂಬುದರ ಬಗ್ಗೆ ಯಾವುದೇ ನಿರ್ಧಾರ ಬಂದಿಲ್ಲ.