ಬೆಂಗಳೂರು : ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು ಅರ್ಥಶಾಸ್ತ್ರ, ಎಂಜಿನಿಯರಿಂಗ್ ಆಯಂಡ್ ಕಂಪ್ಯೂಟರ್ ಸೈನ್ಸ್, ಮಾನವಿಕ ಹಾಗೂ ಸಮಾಜ ವಿಜ್ಞಾನಗಳು, ಜೀವ ವಿಜ್ಞಾನಗಳು, ಗಣಿತ ವಿಜ್ಞಾನಗಳು ಹಾಗೂ ಭೌತಶಾಸ್ತ ವಿಜ್ಞಾನಗಳು ಸೇರಿದಂತೆ ಒಟ್ಟು ಆರು ವಿಭಾಗಗಳಲ್ಲಿ 2024ನೇ ಸಾಲಿನ ಇನ್ಫೋಸಿಸ್ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಭಾರತದ ಸಂಶೋಧನೆ ಹಾಗೂ ಪಾಂಡಿತ್ಯದ ಮೇಲೆ ಗಮನಾರ್ಹ ಸಾಧನೆಗೈದ ವ್ಯಕ್ತಿಗಳಿಗೆ ಇನ್ಫೋಸಿಸ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ. ಪ್ರತಿ ವಿಭಾಗದ ಪ್ರಶಸ್ತಿಯೂ ಚಿನ್ನದ ಪದಕ, ಸ್ಮರರಣಿಕೆ ಹಾಗೂ ಒಂದು ಲಕ್ಷ ಡಾಲರ್ ನಗದು ಅಥವಾ ಅದಕ್ಕೆ ಸಮನಾದ ಮೊತ್ತವನ್ನು ಒಳಗೊಂಡಿದೆ.
ಅರ್ಥಶಾಸ್ತ್ರ ವಿಭಾಗದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಅರುಣ್ ಚಂದ್ರಶೇಖರ್, ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ವಾಷಿಂಗ್ಟನ್ ವಿಶ್ವವಿದ್ಯಾಲಯದ ಸ್ಕೂಲ್ ಆಫ್ ಕಂಪ್ಯೂಟರ್ ಸೈನ್ಸ್ ಆಯಂಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಶ್ಯಾಮ್ ಗೊಲ್ಲಕೋಟ, ಮಾನವಿಕ ಮತ್ತು ಸಾಮಾಜಿಕ ವಿಜ್ಞಾನಗಳ ವಿಭಾಗದಲ್ಲಿ ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಇತಿಹಾಸ ಶಾಲೆ, ಶಾಸ್ತ್ರೀಯತೆ ಹಾಗೂ ಪುರಾತತ್ವ ಶಾಸ್ತ್ರದ ಉಪನ್ಯಾಸಕ ಮಹಮೂದ್ ಕೂರಿಯಾಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಪುಣೆಯ ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಜೀವಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಸಿದ್ದೇಶ್ ಕಾಮತ್ ಅವರಿಗೆ ಜೀವ ವಿಜ್ಞಾನಗಳ ವಿಭಾಗದಲ್ಲಿ, ಗಣಿತ ವಿಜ್ಞಾನಗಳ ವಿಭಾಗದಲ್ಲಿ ಕೋಲ್ಕತ್ತಾದ ಭಾರತೀಯ ಸಾಂಖ್ಯಿಕ ಸಂಸ್ಥೆಯ ಸೈದ್ಧಾಂತಿಕ ಸಾಂಖ್ಯಿಕ ಶಾಸ್ತ್ರ ಹಾಗೂ ಗಣಿತ ಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿರುವ ನೀನಾ ಗುಪ್ತಾ, ಭೌತಶಾಸ್ತ್ರ ವಿಜ್ಞಾನಗಳ ವಿಭಾಗದಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕಿಯಾಗಿರುವ ವೇದಿಕಾ ಖೆಮಾನಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.
ಕಳೆದ 15 ವರ್ಷಗಳಿಂದ ಮನುಷ್ಯರ ಬದುಕಿನ ವಿವಿಧ ಆಯಾಮಗಳ ಮೇಲೆ ಪ್ರಭಾವ ಬೀರುವಂತಹ ಅದ್ಭುತ ಸಂಶೋಧನೆಗಳನ್ನು ನಡೆಸಿದ ಸಾಧಕರನ್ನು ಗುರುತಿಸುತ್ತಾ ಬರುತ್ತಿರುವ ಇನ್ಫೋಸಿಸ್ ವಿಜ್ಞಾನ ಪ್ರತಿಷ್ಠಾನವು, ಅವರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.