ರಾಂಚಿ/ಪಟ್ನಾ: ಜಾರ್ಖಂಡ್ ವಿಧಾನಸಭೆ 43 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನವು ಬುಧವಾರ ನಡೆದಿದ್ದು ಪ್ರಾಥಮಿಕ ಮಾಹಿತಿ ಪ್ರಕಾರ ಶೇ 66.18ರಷ್ಟು ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಎಂ.ಎಸ್. ಧೋನಿ, ಅವರ ಪತ್ನಿ ಸಾಕ್ಷಿ, ಮುಖ್ಯಮಂತ್ರಿ ಹೇಮಂತ್, ಪತ್ನಿ ಕಲ್ಪನಾ ಸೋರೆನ್ ಸೇರಿದಂತೆ ಹಲವು ಗಣ್ಯರು ಮೊದಲ ಹಂತದ ಮತದಾನದಲ್ಲಿ ತಮ್ಮ ಹಕ್ಕು ಚಲಾಯಿಸಿದರು.
ಜೆಎಂಎಂ ತೊರೆದು ಬಿಜೆಪಿ ಪಾಳೆಯ ಸೇರಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಚಂಪೈ ಸೋರೆನ್, ಆರೋಗ್ಯ ಸಚಿವ ಬನ್ನಾ ಗುಪ್ತಾ, ಜೆಎಂಎಂನ ರಾಜ್ಯಸಭಾ ಸದಸ್ಯೆ ಮಹುವಾ ಮಾಂಝಿ, ಪ್ರತಿಮಾ ದಾಸ್ (ಮಾಜಿ ಮುಖ್ಯಮಂತ್ರಿ ರಘುವರ್ ದಾಸ್ (ಈಗ ಒಡಿಶಾ ರಾಜ್ಯಪಾಲ) ಅವರ ಸೊಸೆ) ಸೇರಿದಂತೆ ಹಲವರ ಫಲಿತಾಂಶವು ಮತಗಟ್ಟೆಯಲ್ಲಿ ಭದ್ರಗೊಂಡಿದೆ.
ಉಳಿದ 38 ಕ್ಷೇತ್ರಗಳಿಗೆ ನ.20ರಂದು ಮತದಾನ ನಡೆಯಲಿದೆ.
75 ವರ್ಷಗಳಲ್ಲಿ ಮೊದಲ ಬಾರಿಗೆ ಮತದಾನ
ರಾಂಚಿ ಸಮೀಪದ ತಮಢ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಕ್ಸಲ್ ಪೀಡಿತ ಅರಾಹಂಗಾ ಗ್ರಾಮದ ಜನರು ಸ್ವಾತಂತ್ರ್ಯಾ ನಂತರ ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸಿದರು. ನಕ್ಸಲರ ಭಯದಿಂದಾಗಿ ಈ ಗ್ರಾಮದವರು ಮತದಾನದ ತಮ್ಮ ಹಕ್ಕನ್ನು ಇಷ್ಟು ವರ್ಷಗಳವರೆಗೆ ಚಲಾಯಿಸಿಯೇ ಇರಲಿಲ್ಲ.
ಲಿಂಗತ್ವ ಅಲ್ಪಸಂಖ್ಯಾತ ಏಕೈಕ ಅಭ್ಯರ್ಥಿ ನಗ್ಮಾ
ವಿಧಾನಸಭಾ ಚುನಾವಣಾ ಕಣದಲ್ಲಿ ಇರುವ ಏಕೈಕ ಲಿಂಗತ್ವ ಅಲ್ಪಸಂಖ್ಯಾತೆ ನಗ್ಮಾ ರಾಣಿ ಅವರು ಬುಧವಾರ ಮತ ಚಲಾಯಿಸಿದರು. ರಾಂಚಿ ಸಮೀಪದ ಹಾಠಿಯಾ ಕ್ಷೇತ್ರದಿಂದ 35 ವರ್ಷದ ನಗ್ಮಾ ಅವರು ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯ ನವಿನ್ ಜೈಸ್ವಾಲ್ ಹಾಗೂ ಕಾಂಗ್ರೆಸ್‌ನ ಅಜಯ್ ನಾಥ್ ನಗ್ಮಾ ಅವರು ಪ್ರತಿಸ್ಪರ್ಧಿಗಳಾಗಿದ್ದಾರೆ.
'ಪ್ರಚಾರದುದ್ದಕ್ಕೂ ಜನರು ನನಗೆ ನೀಡಿರುವ ಬೆಂಬಲದಿಂದ ಆಶ್ಚರ್ಯಗೊಂಡಿದ್ದೇನೆ. ಜನರು ನನಗೆ ಮತ ನೀಡುತ್ತಾರೆ ಎಂಬ ನಂಬಿಕೆ ಇದೆ. ನಾನು ಈ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ' ಎಂದು ನಗ್ಮಾ ಅವರು ವಿಶ್ವಾಸ ವ್ಯಕ್ತಪಡಿಸಿದರು. ಮಗಧ್ ವಿಶ್ವವಿದ್ಯಾಲಯದಿಂದ ನಗ್ಮಾ ಅವರು ಇತಿಹಾಸದಲ್ಲಿ ಪದವಿ ಪಡೆದುಕೊಂಡಿದ್ದಾರೆ.