ಚಂಡೀಗಢ: ಪಾಕಿಸ್ತಾನದಿಂದ ದೇಶಕ್ಕೆ ಅಕ್ರಮ ಸಾಗಣೆ ಮಾಡುತ್ತಿದ್ದ 8 ಅತ್ಯಾಧುನಿಕ ಪಿಸ್ತೂಲ್‌ಗಳನ್ನು ಪಂಜಾಬ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶಸ್ತ್ರಾಸ್ತ್ರಗಳನ್ನು ಮತ್ತೊಬ್ಬ ವ್ಯಕ್ತಿಗೆ ಹಸ್ತಾಂತರಿಸಲು ಕಾಯುತ್ತಿದ್ದ ವೇಳೆ ಅಮೃತಸರದ ನೂರ್ಪುರ್ ಪಾದ್ರಿ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಅಮೃತಸರದ ಕೌಲೋವಲ್ ಗ್ರಾಮದ ನಿವಾಸಿಗಳಾದ ಜಗ್‌ಜಿತ್ ಸಿಂಗ್ ಮತ್ತು ಗುರ್ವಿಂದರ್ ಸಿಂಗ್ ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಗೌರವ್ ಯಾದವ್ ಹೇಳಿದ್ದಾರೆ.
ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪಾಕಿಸ್ತಾನದಿಂದ ದೇಶಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ಪಡೆದ ಪೊಲೀಸರ ತಂಡ ಶೋಧ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಆರೋಪಿಗಳಿಬ್ಬರನ್ನು ಬಂಧಿಸಿದೆ. ಪ್ರಕರಣದ ಕಿಂಗ್‌ಪಿನ್ ಅನ್ನು ಪೊಲೀಸರು ಗುರುತಿಸಿದ್ದು, ಆತನ ಪತ್ತೆಗಾಗಿ ಹಲವು ತಂಡಗಳನ್ನು ನಿಯೋಜಿಸಲಾಗಿದೆ ಎಂದು ಯಾದವ್ ತಿಳಿಸಿದ್ದಾರೆ.