ಪ್ರಸಿದ್ಧ ಜ್ಯುವೇಲರಿ ಅಂಗಡಿ ಒಂದರಲ್ಲಿ ಪತ್ನಿಗಾಗಿ ಚಿನ್ನದ ಸರ ಖರೀದಿಸಿದ್ದ ಭಾರತ ಮೂಲದ ಸಿಂಗಪುರ ವ್ಯಕ್ತಿಯೊಬ್ಬರಿಗೆ ಲಾಟರಿಯಲ್ಲಿ ₹8 ಕೋಟಿಗೂ ಅಧಿಕ ಹಣ ಲಭಿಸಿದೆ.
ಸಿಂಗಪುರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಪ್ರೊಜೆಕ್ಟ್ ಎಂಜಿನಿಯರ್ ಆಗಿರುವ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಎನ್ನುವ ವ್ಯಕ್ತಿಗೆ ಲಕ್ಕಿ ಡ್ರಾದಲ್ಲಿ 1 ಮಿಲಿಯನ್ ಯುಎಸ್ ಡಾಲರ್ ಹಣ (₹8ಕೋಟಿಗೂ ಅಧಿಕ) ದಕ್ಕಿದೆ.
ಬಾಲಸುಬ್ರಹ್ಮಣ್ಯಂ ಅವರು ನವೆಂಬರ್ 24 ರಂದು ಸಿಂಗಪುರದ ಪ್ರಸಿದ್ಧ ಮುಸ್ತಫಾ ಜುವೇಲರಿಯಲ್ಲಿ ಪತ್ನಿಗಾಗಿ ₹84 ಸಾವಿರ ಮೌಲ್ಯದ ಚಿನ್ನದ ಸರವನ್ನು ಖರೀದಿಸಿದ್ದರು. ಇದೇ ವೇಳೆ ಅಂಗಡಿಯಲ್ಲಿ ಚಿನ್ನ ಖರೀದಿಸಿದವರಿಗೆ ಲಕ್ಕಿ ಡ್ರಾ ಬಹುಮಾನ ನಡೆಯುತ್ತಿತ್ತು.
ಅದೃಷ್ಟದಿಂದ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಅವರು ಡ್ರಾದಲ್ಲಿ ಗೆದ್ದಿದ್ದಾರೆ. ಈ ವಿಚಾರವನ್ನು ಮುಸ್ತಫಾ ಜುವೇಲರಿ ಅವರು ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.
ನನ್ನ ತಂದೆಯ ಪುಣ್ಯಸ್ಮರಣೆಯಂದೇ ನನಗೆ ಈ ಬಹುಮಾನ ಬಂದಿದೆ. ಹಣವನ್ನು ಒಳ್ಳೆಯ ಉದ್ದೇಶಕ್ಕೆ ಬಳಸುತ್ತೇನೆ ಎಂದು ತಮಿಳುನಾಡು ಮೂಲದ ಬಾಲಸುಬ್ರಹ್ಮಣ್ಯಂ ಚಿತಾಂಬರಂ ಹೇಳಿದ್ದಾರೆ. ಈ ಕುರಿತು ಹಿಂದೂಸ್ತಾನ್ ಟೈಮ್ಸ್ ವೆಬ್‌ಸೈಟ್ ವರದಿ ಮಾಡಿದೆ.