ಬದಿಯಡ್ಕ: ಶ್ರೀ ಸತ್ಯಸಾಯಿಬಾಬಾ ಅವರ 99ನೇ ಜನ್ಮದಿನಾಚರಣೆ ಕಾರ್ಯಕ್ರಮ ಶನಿವಾರ ಕಿಳಿಂಗಾರು ಸಾಯಿಮಂದಿರದಲ್ಲಿ ಜರಗಿತು. ಕೊಡುಗೈದಾನಿ ಸಾಯಿರಾಂ ಕೃಷ್ಣ ಭಟ್ ಅವರ ನೇತೃತ್ವದಲ್ಲಿ ಬೆಳಗ್ಗೆ ಭಜನೆ, ಮಧ್ಯಾಹ್ನ ಪೂಜೆ ನಡೆಯಿತು. ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಬಡಜನತೆಗೆ ಟೈಲರಿಂಗ್ ಯಂತ್ರ ಹಾಗೂ ವಿದ್ಯಾಭ್ಯಾಸ, ಚಿಕಿತ್ಸೆಗೆ ವಿವಿಧ ಫಲಾನುಭವಿಗಳಿಗೆ ಧನಸಹಾಯ ವಿತರಿಸಲಾಯಿತು.
ಈ ಸಂದರ್ಭ ಕುಂಬಳೆ ಸಿಐ ವಿನೋದ್ ಕುಮಾರ್ ಉದ್ಘಾಟಿಸಿ ಮಾತನಾಡಿ, ಬಡಜನರ ಕಣ್ಣೀರೊರೆಸುವ ಕಾರ್ಯ ಎಂಬುದು ಬಲುದೊಡ್ಡ ಪುಣ್ಯದ ಕೆಲಸವಾಗಿದೆ. ಇಂತಹ ಕಾರ್ಯಗಳಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡಿರುವ ಕೃಷ್ಣ ಭಟ್ ಅವರು ತನ್ನ ತಂದೆಯ ಸೇವಾಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಬದಿಯಡ್ಕ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ಸದಸ್ಯ ಶಂಕರ ಡಿ., ಬ್ಲಾಕ್ ಪಂಚಾಯಿತಿ ಸದಸ್ಯೆ ಅಶ್ವಿನಿ ಮೊಳೆಯಾರು, ಸಾಮಾಜಿಕ ಮುಖಂಡ ರಾಮಪ್ಪ ಮಂಜೇಶ್ವರ, ಉದನೇಶ್ವರ ಭಟ್ ಅಳಿಕೆ, ಬಿ.ವಿಷ್ಣು ಭಟ್ ಪಾಲಾರು, ರಘುನಾಥ ಪೈ ಕುಂಬಳೆ, ಶಾರದಾ ಸಾಯಿರಾಂ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಕೋರಿ ಮಾತನಾಡಿದರು. ಫಲಾನುಭವಿಗಳಾದ ದುರ್ಗಾಶ್ರೀ ಕರೋಪಾಡಿ, ಜಯಲಕ್ಷ್ಮೀ ಸೂರಂಬೈಲು, ಸುಜಾತ ನಾಯ್ಕಾಪು, ಶರಣ್ಯಾ ಬೇಳ, ಪುಷ್ಪಲತಾ ದೇಲಂಪಾಡಿ, ಹರಿಪ್ರಿಯಾ ಮಜಿರ್ಪಳ್ಳಕಟ್ಟೆ ಇವರಿಗೆ ಹೊಲಿಗೆ ಯಂತ್ರಕ್ಕೆ ಧನಸಹಾಯ ನೀಡಲಾಯಿತು. ವಿದ್ಯಾಭ್ಯಾಸಕ್ಕಾಗಿ ಸುಜಾತ ಮಾನ್ಯ ಹಾಗೂ ಕೃಷ್ಣ ಕುಂಡಂಗುಳಿ ಅವರಿಗೆ ಚಿಕಿತ್ಸಾ ಧನಸಹಾಯ ವಿತರಿಸಲಾಯಿತು. ಕೊಡುಗೈದಾನಿ ಸಾಯಿರಾಂ ಕೃಷ್ಣ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ವೇಣುಗೋಪಾಲ ಕೆ.ಎನ್. ವಂದಿಸಿದರು. ಊರಪರವೂರ ಅಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.