ಕುಂಬಳೆ: ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನ.11,12, ಹಾಗೂ 18,19 ಮತ್ತು 20 ರಂದು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ವಿಶೇಷ ವ್ಯವಸ್ಥೆಗಳೊಂದಿಗೆ ನಡೆಯಲಿದೆ ಎಂದು ಕಲೋತ್ಸವ ಸಂಘಟನಾ ಸಮಿತಿ ಅಧ್ಯಕ್ಷರೂ, ಎಣ್ಮಕಜೆ ಗ್ರಾ.ಪಂ.ಅಧ್ಯಕ್ಷರೂ ಆಗಿರುವ ಸೋಮಶೇಖರ ಜೆ.ಎಸ್. ಅವರು ಕುಂಬಳೆ ಪ್ರೆಸ್ ಪೋರಂನಲ್ಲಿ ಶನಿವಾರ ಬೆಳಿಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.11 ರಂದು ಸೋಮವಾರ ಬೆಳಗ್ಗೆ 9.30ಕ್ಕೆ ಶ್ರೀ ಶಾರದಾಂಬಾ ವಿದ್ಯಾಸಂಸ್ಥೆಯ ಪ್ರಬಂಧಕಿ ಶಾರದಾ ವೈ ಧ್ವಜಾರೋಹಣ ನೆರವೇರಿಸುವರು.ಬಳಿಕ ಎರಡು ದಿನಗಳ ವೇದಿಕೆಯೇತರ ಸ್ಪರ್ಧೆಗಳು ನಡೆಯಲಿವೆ. ನ.À18 ರಂದು.ಸೋಮವಾರ ಅಪರಾಹ್ನ 2.30ಕ್ಕೆ ಕಲೋತ್ಸವದ ಔಪಚಾರಿಕ ಉದ್ಘಾಟನೆ ಜರಗಲಿದೆ. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸುವರು. ಕಾಸರಗೋಡು ಸಂಸದ ರಾಜಮೋಹನ ಉಣ್ಣಿತ್ತಾನ್ ಉದ್ಘಾಟಿಸುವರು. ನ. 11,12 ರಂದು ನಡೆಯಲಿರುವ ವೇದಿಕೆಯೇತರ ಸ್ಪರ್ಧೆಗಳಲ್ಲಿ ಸುಮಾರು 2000 ದಷ್ಟು ಸ್ಪರ್ಧಾಳುಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದು, 18,19 ಮತ್ತು 20 ರವರೆಗೆ ಸುಮಾರು 5000 ದಷ್ಟ್ಟು ಸ್ಪರ್ಧಾಳುಗಳು ವಿವಿಧ ಕಲಾಸ್ಪರ್ಧೆಗಳಲ್ಲಿ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲಿರುವರು. ಈ ಐತಿಹಾಸಿಕ ನೆಲದಲ್ಲಿ ನಡೆಯಲಿರುವ 5 ದಿನಗಳ ಕಲೋತ್ಸವದಲ್ಲಿ ಉಪಜಿಲ್ಲೆಯ 93 ಶಾಲೆಗಳ ಸುಮಾರು 7000 ಕ್ಕೂ ಹೆಚ್ಚು ವಿದ್ಯಾರ್ಥಿಗಳು 16 ವೇದಿಕೆಗಳಲ್ಲಿ 350ಕ್ಕೂ ಹೆಚ್ಚು ಪ್ರಕಾರಗಳಲ್ಲಿ ಪ್ರತಿಭಾ ಪ್ರದರ್ಶನವನ್ನು ನೀಡಲಿದ್ದಾರೆ. ಈ ದಿವಸಗಳಲ್ಲಿ ಸ್ಪರ್ಧಾಳುಗಳ ಹೊರತಾಗಿ ತೀರ್ಪುಗಾರರು, ಅಧ್ಯಾಪಕರು, ಸ್ವಯಂಸೇವಕರು ಮತ್ತು ಊರ ಪರವೂರ ಮಹನೀಯರು ಸೇರಿ ಸುಮಾರು 20000 ಜನರಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಸುಮಾರು 30 ಲಕ್ಷ ರೂ.ಗಳ ಅಂದಾಜು ವೆಚ್ಚದಲ್ಲಿ ನಡೆಯಲಿರುವ ಕಲೋತ್ಸವಕ್ಕೆ ಊರ-ಪರವೂರ ವಿದ್ಯಾಭಿಮಾನಿಗಳು, ದಾನಿಗಳು ಕೈಜೋಡಿಸಿದ್ದಾರೆ. ಶೇಣಿ ಶಾಲೆಯಲ್ಲಿ 1998 ರಿಂದ ಮೊದಲ್ಗೊಂಡು ಈವರೆಗೆ ನಾಲ್ಕು ಬಾರಿ ಕಲೋತ್ಸವಗಳು ನಡೆದಿದ್ದು, ಈ ವರ್ಷ ಐದನೇ ಬಾರಿ ಅಭೂತಪೂರ್ವ ವ್ಯವಸ್ಥೆಗಳೊಂದಿಗೆ ಕಲೋತ್ಸವ ನಡೆಯಲಿದೆ. ಅಲ್ಲದೆ ಕೇರಳ ಶಾಲಾ ಕಲೋತ್ಸವದಲ್ಲಿ ಈವರೆಗೆ 341 ಸ್ಪರ್ಧೆಗಳಿದ್ದುದು ಈ ಬಾರಿ ಹೆಚ್ಚುವರಿಯಾಗಿ ಐದು ಸ್ಪರ್ಧೆಗಳು ಸೇರ್ಪಡೆಗೊಂಡಿದೆ. ಮಂಗಳಂ ಕಳಿ, ಪಣಿಯ ನೃತ್ಯ(ವಯನಾಡಿನ ಕಲಾ ಪ್ರಕಾರ), ಇರುಳ ನೃತ್ಯ(ಇಡುಕ್ಕಿಯ ಕಲಾ ಪ್ರಕಾರ) ಹಾಗೂ ಮಲಪ್ಪುಲಯಾಟ ಆಕರ್ಷಣೆಯನ್ನು ಹೆಚ್ಚಿಸಲಿವೆ ಎಂದವರು ವಿವರಿಸಿದರು.ನ.20 ರಂದು ಸಂಜೆ 4 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಎಂದವರು ತಿಳಿಸಿದರು.
ಕಲೋತ್ಸವದ ಪೂರ್ವಭಾವಿಯಾಗಿ ನ.9 ರಂದು ಅಪರಾಹ್ನ 2 ರಿಂದ ಪೆರ್ಲ ಪೇಟೆಯಿಂದ ಶೇಣಿವರೆಗೆ ಡಂಗುರ ಮೆರವಣಿಗೆ ನಡೆಯಿತು.
ಸುದ್ದಿಗೋಷ್ಠಿಯಲ್ಲಿ ಶೇಣಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರೂ, ಗ್ರಾ.ಪಂ.ಸದಸ್ಯರೂ ಆದ ರಾಧಾಕೃಷ್ಣ ಜೆ.ಎಸ್., ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶಶಿಧರ, ಶೇಣಿ ಹೈಯರ್ ಸೆಕೆಂಡರಿ ವಿಭಾಗದ ಪ್ರಾಂಶುಪಾಲ ಶಾಸ್ತಾ ಕುಮಾರ್, ಕಾರ್ಯಕ್ರಮ ಸಮಿತಿ ಅಧ್ಯಕ್ಷ, ಹೈಸ್ಕೂಲು ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್, ಪಿಟಿಎ ಉಪಾಧ್ಯಕ್ಷ ಉಮರ್ ಕಂಗಿನಮೂಲೆ, ಪ್ರಚಾರ ಸಮಿತಿ ಅಧ್ಯಕ್ಷ ಅಬ್ದುಲ್ ರಹಿಮಾನ್ ಎಂ., ಹಳೆ ವಿದ್ಯಾರ್ಥಿ ಸಂಘದ ಜೊತೆಕಾರ್ಯದರ್ಶಿ ಮುಂದರಲಿ ಕುದ್ರೆಡ್ಕ ಉಪಸ್ಥಿತರಿದ್ದು ಮಾಹಿತಿ ನೀಡಿದರು.
ವಿಶೇಷತೆ:
-ಹೊಸದಾಗಿ ಸ್ಪರ್ಧೆಗಳಿಗೆ ಸೇರ್ಪಡೆಗೊಂಡ ಐದು ಕಲಾಪ್ರಕಾರಗಳಲ್ಲಿ ಹಿರಿಯ ಪ್ರಾಥಮಿಕ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಸ್ಪರ್ಧೆಗಳು ಪ್ರತ್ಯೇಕವಾಗಿ ನಡೆಯಲಿದೆ.
-ಬೆಳಿಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸ್ಪರ್ಧಾಳುಗಳಿಗೆ, ಶಿಕ್ಷಕರು, ಸ್ವಯಂಸೇವಕರು ಹಾಗೂ ಸ್ಪರ್ಧೆಗಳ ನಿರ್ಣಾಕರಿಗೆ ಊಟ-ಚಹಾ-ಪಾನೀಯ ವ್ಯವಸ್ಥೆ ಇರಲಿದ್ದು, ಮಧ್ಯಾಹ್ನ ಆಗಮಿಸುವ ಎಲ್ಲಾ ನಾಗರಿಕರಿಗೂ ಮುಕ್ತ ಊಟೋಪಾಚರ ಇರಲಿದೆ.
-ಕಲೋತ್ಸವ ಸಹಿತ ವಿವಿಧ ಬೃಹತ್ ಕಾರ್ಯಕ್ರಮಗಳಲ್ಲಿ ಅಡುಗೆ ಸಿದ್ದಪಡಿಸುವಲ್ಲಿ ಖ್ಯಾತರಾದ ಗೋಪಾಲಕೃಷ್ಣ ಭಟ್ ಪೆರ್ಮುದೆ ಶುಚಿ-ರುಚಿಯಾದ ಆಹಾರಗಳು ಶೇಣಿಯಲ್ಲೂ ನಿರ್ವಹಿಸುವರು.
-ಗ್ರಾಮೀಣ ಹಚ್ಚ-ಹಸಿರಿನ ಹಳ್ಳಿ ವಾತಾವರಣ ಶೇಣಿ ಶಾಲೆಯಲ್ಲಿ ಇದು ಐದನೇ ಬಾರಿ ಉಪಜಿಲ್ಲಾ ಶಾಲಾ ಕಲೋತ್ಸವ ಆಯೋಜನೆಗೊಳ್ಳುತ್ತಿದೆ.