ರಾಂಚಿ: ಬಾಂಗ್ಲಾದೇಶದಿಂದ ಅಕ್ರಮ ವಲಸೆ ಮತ್ತು ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳ, ವಿಧಾನಸಭೆ ಚುನಾವಣೆ ನಡೆಯುತ್ತಿರುವ ಜಾರ್ಖಂಡ್‌ನ ಹಲವು ಪ್ರದೇಶಗಳಲ್ಲಿ ಜಾರಿ ನಿರ್ದೆಶನಾಲಯದ(ಇ.ಡಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಾರ್ಖಂಡ್ ವಿಧಾನಸಭೆ ಚುನಾವಣೆಗೂ ಒಂದು ದಿನ ಮೊದಲು ಈ ದಾಳಿ ನಡೆದಿದೆ. ನೆರೆಹೊರೆಯ ಎರಡೂ ರಾಜ್ಯಗಳ 17 ಸ್ಥಳಗಳ ಮೇಲೆ ದಾಳಿ ನಡೆದಿದೆ ಎಂದು ರಾಂಚಿಯ ಇ.ಡಿ ಪ್ರಾದೇಶಿಕ ಕಚೇರಿ ಮೂಲಗಳು ತಿಳಿಸಿವೆ.
ರಾಂಚಿಯ ಹೋಟೆಲ್ ಮತ್ತು ರೆಸಾರ್ಟ್ ಒಂದರ ಬಳಿ ಸಿಆರ್‌ಪಿಎಫ್ ಜಮಾವಣೆ, ಇ.ಡಿ ಅಧಿಕಾರಿಗಳು ದಾಖಲೆ ಪತ್ರಗಳಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ವಿಡಿಯೊವನ್ನು ಮಾಧ್ಯಮಗಳು ವರದಿ ಮಾಡಿವೆ.
ಮಧ್ಯಾಹ್ನ 3 ಗಂಟೆ ವೇಳೆಗೆ ದಾಳಿ ಕುರಿತಂತೆ ಮಾಹಿತಿ ಹಂಚಿಕೊಂಡಿರುವ ಇ.ಡಿ, ನಕಲಿ ಆಧಾರ್ ಕಾರ್ಡ್, ನಕಲಿ ಪಾಸ್‌ಪೋರ್ಟ್, ಅಕ್ರಮ ಶಸ್ತ್ರಾಸ್ತ್ರಗಳು, ಸ್ಥಿರಾಸ್ತಿ ದಾಖಲೆ ಪತ್ರಗಳು, ನಗದು, ಒಡವೆ, ಹಲವು ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದೆ.
ಈ ಪೋಸ್ಟ್ ಜೊತೆ ವಶಪಡಿಸಿಕೊಂಡ ವಸ್ತುಗಳ ಚಿತ್ರವನ್ನೂ ಇ.ಡಿ ಹಂಚಿಕೊಂಡಿದೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದೆ.
ಕೆಲವು ಬಾಂಗ್ಲಾದೇಶಿ ಮಹಿಳೆಯರನ್ನು ಜಾರ್ಖಂಡ್‌ಗೆ ಕಳ್ಳಸಾಗಣೆ ಮತ್ತು ಅಕ್ರಮ ವಲಸೆ ಸೇರಿದಂತೆ ಇತರೆ ಆರೋಪಗಳಡಿ ಸೆಪ್ಟೆಂಬರ್‌ನಲ್ಲಿ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು.
ಇತ್ತೀಚಿನ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಂತಾಲ್ ಪರಗಣ ಮತ್ತು ಕೊಲ್ಹಾನ್ ಪ್ರದೇಶಗಳ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳ ಜನಸಂಖ್ಯೆಯಲ್ಲಿ ಬದಲಾವಣೆ ತರಲು ರಾಜ್ಯ ಸರ್ಕಾರವು ಇಂತಹ ಒಳನುಸುಳುವಿಕೆಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಬಿಜೆಪಿ ನಾಯಕರು ಆರೋಪಿಸಿದ್ದರು.
ಆಡಳಿತಾರೂಢ ಜೆಎಂಎಂ ನೇತೃತ್ವದ ಒಕ್ಕೂಟವು ಜಾರ್ಖಂಡ್ ಅನ್ನು ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿ ನುಸುಳುಕೋರರ ಧರ್ಮಶಾಲೆಯನ್ನಾಗಿ ಪರಿವರ್ತಿಸುತ್ತಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೋಮವಾರ ಆರೋಪಿಸಿದ್ದರು.
ಬಿಜೆಪಿ ಅಧಿಕಾರಕ್ಕೆ ಬಂದರೆ ಒಳನುಸುಳುಕೋರರ ಪತ್ತೆಗೆ ಸಮಿತಿ ರಚಿಸಲಾಗುವುದು ಎಂದು ಸೋಮವಾರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದರು.
ಜಾರ್ಖಂಡ್‌ನ ವಿಧಾನಸಭೆಯ 43 ಕ್ಷೇತ್ರಗಳಲ್ಲಿ ನಾಳೆ(ನ.13) ಮೊದಲ ಹಂತದ ಚುನಾವಣೆ ನಡೆಯುತ್ತಿದ್ದು, 38 ಕ್ಷೇತ್ರಗಳಲ್ಲಿ ನವೆಂಬರ್ 20ರಂದು 2ನೇ ಹಂತದ ಮತದಾನ ನಡೆಯಲಿದೆ.