ಮಥುರಾ: ದೇವಾಲಯಕ್ಕೆ ಭೇಟಿ ನೀಡುವ ಭಕ್ತನು ಅಲ್ಲಿ ನೀಡುವ ತೀರ್ಥವನ್ನು ಕುಡಿದು ತಲೆಗೆ ಚುಮುಕಿಸಿದರೆ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿ ನಮ್ಮಲ್ಲಿದೆ. ಆದರೆ, ಎಸಿ (AC) ನೀರನ್ನು ಜನರು ತೀರ್ಥ ಎಂದು ಸರತಿ ಸಾಲಿನಲ್ಲಿ ನಿಂತು ಸೇವಿಸಿರುವ ಘಟನೆ ಮಥುರಾದಲ್ಲಿ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಥುರಾ (Mathura) ವೃಂದಾವನದ ಬಾಂಕೆ ಬಿಹಾರಿ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಜನರು ಇದನ್ನು ಚರಣ್ ಅಮೃತ್ (ಶ್ರೀ ಕೃಷ್ಣನ ಪಾದದ ಪವಿತ್ರ ನೀರು) ಎಂದು ಭಾವಿಸಿ ಸಾಲಿನಲ್ಲಿ ನಿಂತು ಸೇವಿಸಿದ್ದಾರೆ. ಇದನ್ನು ಕಂಡು ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದು, ಶಿಕ್ಷಣದ ಅಗತ್ಯತೆಯನ್ನು ಒತ್ತಿ ಹೇಳಿದ್ದಾರೆ.
ಅಷ್ಟಕ್ಕೂ ನಡೆದಿದ್ದಾರು ಏನು?
ಉತ್ತರಪ್ರದೇಶದ ಪ್ರಸಿದ್ಧ ಧಾರ್ಮಿಕ ಸ್ಥಳ ಮಥುರಾದ (Mathura) ವೃಂದಾವನದಲ್ಲಿರುವ ಬಾಂಕ ಬಿಹಾರಿ ದೇವಾಲಯದ ಗೋಡೆಯಲ್ಲಿರುವ ಆನೆಯ ಮೂರ್ತಿಯ ಶಿಲ್ಪದಿಂದ ನಿಗೂಢವಾಗಿ ಸೋರಿಕೆಯಾಗುತ್ತಿದ್ದ ನೀರನ್ನು ಕಂಡು ಜನರು ಚರಣ್ ಅಮೃತ್ (ಕೃಷ್ಣನ ಪಾದದ ಪವಿತ್ರ ನೀರು) ಎಂದು ಭಾವಿಸಿ ಸೇವಿಸಿದ್ದಾರೆ. ಆದರೆ, ಅದು ಎಸಿಯಿಂದ (AC) ಸೋರಿಕೆಯಾಗುತ್ತಿದ್ದ ನೀರು ಎಂದು ತಿಳಿದು ಬಂದಿದ್ದು, ಭಕ್ತರು ತಪ್ಪಾಗಿ ಭಾವಿಸಿ ಆ ನೀರನ್ನೇ ತೀರ್ಥ ಎಂದು ಸೇವಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನವೆಂಬರ್ 03ರಂದು ZORO ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೂ 4 ಮಿಲಿಯನ್ಗೂ ಅಧಿಕ ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಅನೇಕರು ಜನರಿಗೆ ಶಿಕ್ಷಣದ ಅಗತ್ಯವಿದ್ದು, ದೇವಾಲಯದ ಆಡಳಿತ ಮಂಡಳಿ ವಿರುದ್ಧ ಕಿಡಿಕಾರಿದ್ದಾರೆ.