ನವದೆಹಲಿ: ಚುನಾವಣಾ ಫಲಿತಾಂಶ ಅಂದಾಜಿಸುವಲ್ಲಿ ಒಂದೆರಡು ಮತಗಟ್ಟೆ ಸಮೀಕ್ಷೆಗಳು ಮಹಾರಾಷ್ಟ್ರ ವಿಷಯದಲ್ಲಿ ತುಸು ಸಮೀಪವಿದ್ದರೆ, ಜಾರ್ಖಂಡ್ ವಿಷಯದಲ್ಲಿ ವಿಫಲವಾಗಿವೆ. ಯಾವುದೇ ಸಮೀಕ್ಷೆ 'ಮಹಾಯುತಿ'ಯ ಭಾರಿ ಗೆಲುವನ್ನು ಅಂದಾಜಿಸಿರಲಿಲ್ಲ.
'ಆಯಕ್ಸಿಸ್ ಮೈಇಂಡಿಯಾ' ಸಮೀಕ್ಷೆಯು ಮಹಾಯುತಿ 178-200 ಕ್ಷೇತ್ರಗಳಲ್ಲಿ ಹಾಗೂ ಎಂವಿಎ ಮೈತ್ರಿಯು 82-102 ಹಾಗೂ ಇತರರು 6-12 ಕ್ಷೇತ್ರಗಳಲ್ಲಿ ಗೆಲ್ಲುವ ಅಂದಾಜು ಮಾಡಿತ್ತು.
ಫಲಿತಾಂಶಕ್ಕೆ ಹತ್ತಿರದ ಅಂದಾಜು ಮಾಡಿದ್ದ ಸಮೀಕ್ಷೆ ಇದು.
ಜಾರ್ಖಂಡ್‌ನಲ್ಲಿ ಇತರೆ ಎಲ್ಲ ಮತಗಟ್ಟೆ ಸಮೀಕ್ಷೆಗಳು ಎನ್‌ಡಿಎ ಜಯಗಳಿಸಲಿದೆ ಎಂದು ಅಂದಾಜು ಮಾಡಿದ್ದರೆ, 'ಆಯಕ್ಸಿಸ್ ಮೈಇಂಡಿಯಾ' ಸಮೀಕ್ಷೆಯು ಕಾಂಗ್ರೆಸ್-ಜೆಎಂಎಂ ಮೈತ್ರಿಕೂಟವು 49ರಿಂದ 59 ಕ್ಷೇತ್ರವನ್ನು ಗೆಲ್ಲಬಹುದು ಎಂದು ಅಂದಾಜು ಮಾಡಿತ್ತು. ಆದರೆ, ಈ ಸಂಸ್ಥೆಯ ಸಮೀಕ್ಷೆಯು ಲೋಕಸಭೆ ಚುನಾವಣೆ ಮತ್ತು ಹರಿಯಾಣ ವಿಧಾನಸಭೆಯ ಚುನಾವಣೆಯಲ್ಲಿ ಮಾಡಿದ್ದ ಅಂದಾಜು ಕೂಡ ಫಲಿತಾಂಶಕ್ಕಿಂತ ಬಹಳ ಭಿನ್ನವಾಗಿತ್ತು. ಇತ್ತೀಚೆಗೆ ಅಮೆರಿಕ ಚುನಾವಣೆಯ ಫಲಿತಾಂಶವನ್ನು ಈ ಸಂಸ್ಥೆ ಸರಿಯಾಗಿ ಅಂದಾಜು ಮಾಡಿತ್ತು.
288 ಸದಸ್ಯ ಬಲದ ಮಹಾರಾಷ್ಟ್ರದಲ್ಲಿ ಸರಳ ಬಹುಮತಕ್ಕೆ ಬೇಕಾದ ಸಂಖ್ಯೆ 145 ಆಗಿದ್ದರೆ, 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 41 ಸ್ಥಾನ ಬೇಕಿತ್ತು.
ಕೆಲ ಮತಗಟ್ಟೆ ಸಮೀಕ್ಷೆಗಳು ಉತ್ತರ ಪ್ರದೇಶದಲ್ಲಿ ಉಪ ಚುನಾವಣೆ ನಡೆದ 9 ಕ್ಷೇತ್ರಗಳ ಪೈಕಿ 5-7 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಬಹುದು ಎಂದು ಅಂದಾಜು ಮಾಡಿತ್ತು.
ಈ ಹಿಂದೆ ಹಲವು ಬಾರಿ ಮತಗಟ್ಟೆ ಸಮೀಕ್ಷೆಗಳನ್ನು ನಡೆಸುವುದರ ಕಾರ್ಯಶೈಲಿಯನ್ನು ಚುನಾವಣಾ ಆಯೋಗವು ಆಕ್ಷೇಪಿಸಿತ್ತು.