ಲೊಹರ್‌ದಗಾ/ ಸಿಮ್‌ಡೆಗಾ/ ಜಾರ್ಖಂಡ್: 'ಬಿಜೆಪಿ ಪಕ್ಷವು ಮಣಿಪುರವನ್ನು ಹೊತ್ತಿ ಉರಿಯುವಂತೆ ಮಾಡಿದೆ. ಧರ್ಮದ ಆಧಾರದಲ್ಲಿ ಇಡೀ ದೇಶದಲ್ಲಿ ಜನರನ್ನು ವಿಭಜಿಸುವ ಯತ್ನ ಮಾಡುತ್ತಿದೆ' ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಾರ್ಖಂಡ್ ವಿಧಾನಸಭಾ ಚುನಾವಣೆ ಸಂಬಂಧ ಲೊಹರ್‌ದಗಾದಲ್ಲಿ ಶುಕ್ರವಾರ ನಡೆದ ಬೃಹತ್ ಚುನಾವಣಾ ರ‍್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ದೇಶದ ಶೇಕಡಾ 90ರಷ್ಟು ಜನರಿಗೆ ಸಿಗಬೇಕಿದ್ದ ಹಕ್ಕು ಹಾಗೂ ಸೌಲಭ್ಯಗಳಿಂದ ಬಿಜೆಪಿಯು ವಂಚಿತರನ್ನಾಗಿ ಮಾಡಿದೆ.
'ದೇಶದಲ್ಲಿ ಪ್ರೀತಿಯ ಸಂದೇಶವನ್ನು ಸಾರಲು ಕನ್ಯಾಕುಮಾರಿಯಿಂದ ಕಾಶ್ಮೀರದ ತನಕ 4 ಸಾವಿರ ಕಿ.ಮೀ ಪಾದಯಾತ್ರೆ ನಡೆಸಿದ್ದನ್ನು ನೆನಪಿಸಿಕೊಂಡ ರಾಹುಲ್ ಗಾಂಧಿ, ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ ತೆರೆಯುವ ಪ್ರಯತ್ನ ನಡೆಸಿದ್ದೆನು' ಎಂದು ಹೇಳಿದರು.
'ನಾನು ಬುಡಕಟ್ಟು ಸಮುದಾಯ, ದಲಿತರ ವಿಚಾರವಾಗಿ ಮಾತನಾಡಿದ ತಕ್ಷಣ, ದೇಶವನ್ನು ಇಬ್ಭಾಗ ಮಾಡುತ್ತಿದ್ದೇನೆ ಎಂದು ಬಿಜೆಪಿ ಆರೋಪಿಸುತ್ತಿದೆ. ನಾನು ದೇಶವನ್ನು ಒಗ್ಗೂಡಿಸಿ, ಬಲಪಡಿಸಲು ಇಲ್ಲಿ ನಿಂತಿದ್ದೇನೆ. ನಾನು ದೇಶದ ಶೇಕಡಾ 90ರಷ್ಟು ಜನರ ವಿಚಾರವಾಗಿ ಮಾತನಾಡುತ್ತಿದ್ದೇನೆ. ಈ ಕೆಲಸವನ್ನು ಮುಂದುವರಿಸುತ್ತೇನೆ' ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಉದ್ಯಮಿಗಳ ಸಾಲಮನ್ನಾ: 'ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವು 25 ಉದ್ಯಮಿಗಳ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಆದರೆ, ರೈತರಿಗೆ ನೆರವಾಗುವ ಉದ್ದೇಶದಿಂದ ಯುಪಿಎ ಅವಧಿಯಲ್ಲಿ ಮಾಡಿದ್ದ ₹72 ಸಾವಿರ ಕೋಟಿ ಸಾಲಮನ್ನಾದ ಕುರಿತು ಆರೋಪ ಮಾಡುತ್ತಿದೆ' ಎಂದು ಆರೋಪಿಸಿದರು.
ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ರೈತರ ಸಾಲಮನ್ನಾ ಮಾಡಿದೆಯಾ..? ಮಾಡಿಲ್ಲ. ಏಕೆಂದರೆ ನೀವೆಲ್ಲರೂ, ಬುಡಕಟ್ಟು, ದಲಿತ ಹಾಗೂ ಹಿಂದುಳಿದ ಸಮುದಾಯದವರು. ಬಿಜೆಪಿ ಎಂದಿಗೂ ನಿಮ್ಮ ಸಾಲಮನ್ನಾ ಮಾಡುವುದಿಲ್ಲ' ಎಂದರು.
ಸಿಮ್‌ಡೆಗಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ' ರಾಜ್ಯದ ಬುಡಕಟ್ಟು ಸಮುದಾಯದಿಂದ ಬಿಜೆಪಿಯು ಜಲ್, ಜಂಗಲ್, ಜಮೀನು (ನೀರು, ಅರಣ್ಯ, ಭೂಮಿ) ಕಿತ್ತುಕೊಳ್ಳಲಿದೆ' ಎಂದು ದೂರಿದರು.
ಈ ಚುನಾವಣೆಯು ಇಂಡಿಯಾ ಒಕ್ಕೂಟ ಹಾಗೂ ಬಿಜೆಪಿ-ಆರ್‌ಎಸ್‌ಎಸ್ ಸಿದ್ದಾಂತದ ನಡುವಿನ ಚುನಾವಣೆಯಾಗಿದೆ ಎಂದು ಈ ವೇಳೆ ಪ್ರತಿಪಾದಿಸಿದರು.
ಜಾರ್ಖಂಡ್ ವಿಧಾನಸಭೆಗೆ ಚುನಾವಣೆ ಘೋಷಣೆಯಾದ ಬಳಿಕ ರಾಹುಲ್ ಗಾಂಧಿ ಅವರು ಎರಡನೇ ಬಾರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ನ.13 ಹಾಗೂ ನ.23ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಹಾಗೂ ಜೆಎಂಎಂ ನೇತೃತ್ವದ 'ಇಂಡಿಯಾ' ಒಕ್ಕೂಟದ ನಡುವೆ ಬೇರ ಹಣಾಹಣಿ ನಡೆಯಲಿದೆ..