ಜಮ್ಮು: ಜಮ್ಮುವಿನ ಅಖನೂರ್ ವಲಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹತರಾದ ಮೂವರು ಭಯೋತ್ಪಾದಕರು ನಿಷಧಿತ ಜೈಷ್-ಎ-ಮೊಹಮ್ಮದ್ ಸಂಘಟನೆಗೆ ಸೇರಿದವರು ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಈ ಮೂವರು ಪಾಕ್ ಆಕ್ರಮಿತ ಕಾಶ್ಮೀರದಿಂದ ಜಮ್ಮುವಿಗೆ ಈಚೆಗೆ ನುಸುಳಿದ್ದರು.
ಈ ಮೂವರು ಬಟ್ಟಲ್ ಪ್ರದೇಶದಿಂದ ಅಖನೂರ್ ಪ್ರದೇಶವನ್ನು ಪ್ರವೇಶಿಸಿದ್ದರು. ಅವರು ಜೈಷ್-ಎ-ಮೊಹಮ್ಮದ್ ಸಂಘಟನೆಯ ಜೊತೆ ನಂಟು ಹೊಂದಿದ್ದರು ಎಂಬುದು ಅವರಿಂದ ವಶಪಡಿಸಿಕೊಳ್ಳಲಾದ ವಯರ್‌ಲೆಸ್ ಉಪಕರಣವು ಖಚಿತಪಡಿಸಿದೆ.
ಈ ಪ್ರದೇಶದಲ್ಲಿ ಬಹುಕಾಲದಿಂದ ನುಸುಳುವಿಕೆ ಕಂಡುಬಂದಿಲ್ಲ ಎಂದು ಸೇನೆಯ ಅಧಿಕಾರಿ, ಮೇಜರ್ ಜನರಲ್ ಸಮೀರ್ ಶ್ರೀವಾಸ್ತವ ಅವರು ಹೇಳಿದ್ದರೂ, ಹಿಂದಿನ ವರ್ಷದ ಏಪ್ರಿಲ್ ಹಾಗೂ ಡಿಸೆಂಬರ್‌ನಲ್ಲಿ ಇಲ್ಲಿ ಭಯೋತ್ಪಾದಕರ ಚಲನವಲನ ಇತ್ತು ಎಂಬುದನ್ನು ಕೆಲವು ಅಧಿಕಾರಿಗಳು ಹೇಳಿದ್ದಾರೆ.
ಬಟ್ಟಲ್‌ನ ಶಿವ ಮಂದಿರ ಅಸಾನ್‌ಗೆ ತೆರಳುತ್ತಿದ್ದ ಮೂವರು ಹದಿಹರೆಯದವರು, ಶಸ್ತ್ರಸಜ್ಜಿತರಾಗಿದ್ದ ಈ ಭಯೋತ್ಪಾದಕರನ್ನು ಸೋಮವಾರ ಬೆಳಿಗ್ಗೆ ಕಂಡರು. 'ನೀವು ಸೇನೆಗೆ ಸೇರಿದವರಾ' ಎಂದು ಈ ಮೂವರು ಪ್ರಶ್ನಿಸಿದಾಗ ಭಯೋತ್ಪಾದಕರು ಕೋಪದಿಂದ ಪ್ರತಿಕ್ರಿಯಿಸಿದ್ದರು.
ತಮ್ಮ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದರೆ ಪರಿಣಾಮ ಕೆಟ್ಟದ್ದಾಗಿರುತ್ತದೆ ಎಂದು ಬೆದರಿಸಿದ್ದರು. ಹದಿಹರೆಯದವರು ಮುಖ್ಯರಸ್ತೆ ತಲುಪುವವರೆಗೂ ಭಯೋತ್ಪಾದಕರು ಅವರನ್ನು ಹಿಂಬಾಲಿಸಿದ್ದರು. ಆದರೆ ಅಲ್ಲಿ ಸೇನಾ ವಾಹನಗಳು ಕಂಡ ನಂತರ, ಭಯೋತ್ಪಾದಕರು ಆ ವಾಹನಗಳನ್ನು ಗುರಿಯಾಗಿಸಿಕೊಂಡು ಗುಂಡು ಹಾರಿಸಿದರು.
ಇದಕ್ಕೆ ಪ್ರತ್ಯುತ್ತರವಾಗಿ ವಿಶೇಷ ಪಡೆಯ ಯೋಧರು ಹಾಗೂ ಎನ್‌ಎಸ್‌ಜಿ ಕಮಾಂಡೊಗಳು ಕಾರ್ಯಾಚರಣೆ ನಡೆಸಿ, ಭಯೋತ್ಪಾದಕರನ್ನು ಹತ್ಯೆ ಮಾಡಿದರು.