ನವದೆಹಲಿ: ದೇಶದಲ್ಲಿ ಮತಪತ್ರ ವ್ಯವಸ್ಥೆಯನ್ನು ಪುನಃ ಜಾರಿಗೆ ತರಬೇಕು ಎಂದು ಒತ್ತಾಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದಕ್ಕಾಗಿ ಜಾಗೃತಿ ಮೂಡಿಸಲು ಭಾರತ್ ಜೋಡೊ ಯಾತ್ರೆಯಂಥ ಆಂದೋಲನಕ್ಕೆ ಕರೆ ನೀಡಿದ್ದಾರೆ.
ಇಲ್ಲಿನ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ 'ಸಂವಿಧಾನ ರಕ್ಷಕ ಅಭಿಯಾನ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ನಮಗೆ ಇವಿಎಂ ಬೇಡ, ಅವರು ತಮ್ಮ ಬಳಿ ಇವಿಎಂ ಇಟ್ಟುಕೊಳ್ಳಲಿ.
ಬ್ಯಾಲೆಟ್ ಪೇಪರ್‌ನಲ್ಲಿ ಮತದಾನ ನಡೆಯಬೇಕು. ಆಗ ಅವರ ನಿಲುವೇನು ಮತ್ತು ಅವರ ಸ್ಥಾನ ಏನೆಂಬುದು ಗೊತ್ತಾಗುತ್ತದೆ' ಎಂದರು.
'ಎಲ್ಲ ಬಡ ಮತ್ತು ತುಳಿತಕ್ಕೊಳಗಾದ ಸಮುದಾಯಗಳ ಮತಗಳು ವ್ಯರ್ಥವಾಗುವುದನ್ನು ತಡೆಯಲು ಎಲ್ಲರೂ ಬ್ಯಾಲೆಟ್ ಪೇಪರ್ ಮೂಲಕ ಮತದಾನಕ್ಕೆ ಒತ್ತಾಯಿಸಬೇಕು. ಈ ಬಗ್ಗೆ ಎಲ್ಲರಿಗೂ ಅರಿವು ಮೂಡಿಸಲು, ಮತಪತ್ರ ವ್ಯವಸ್ಥೆಯನ್ನು ಮರಳಿ ತರಲು ನಾವು ಭಾರತ್ ಜೋಡೊ ಯಾತ್ರೆಯಂತಹ ಆಂದೋಲನ ಪ್ರಾರಂಭಿಸಬೇಕು' ಎಂದು ಖರ್ಗೆ ಅವರು ರಾಹುಲ್ ಗಾಂಧಿಗೆ ಒತ್ತಾಯಿಸಿದರು.
'ಪ್ರಧಾನಿ ನರೇಂದ್ರ ಮೋದಿಗೆ ಜಾತಿ ಗಣತಿ ಭಯವಿದೆ. ಜಾತಿ ಗಣತಿಗೆ ಅವಕಾಶ ನೀಡಿದರೆ ಸಮಾಜದ ಎಲ್ಲ ವರ್ಗದವರೂ ತಮ್ಮ ಪಾಲು ಕೇಳುತ್ತಾರೆ. ಆಗ ತಾವು ಅಹಮದಾಬಾದ್‌ಗೆ ಓಡಿಹೋಗಬೇಕಾಗುತ್ತದೆ ಎಂಬ ಭಯ ಮೋದಿ ಅವರಿಗೆ ಇದೆ' ಎಂದು ಲೇವಡಿ ಮಾಡಿದರು.
'ಕಟೆಂಗೆ, ಬಟೆಂಗೆ ಎನ್ನುತ್ತಿದ್ದಾರೆ, ಆದರೆ ದೇಶವನ್ನು ವಿಭಜಿಸುವವರು ಯಾರು?, ಅವರೇ ಧರ್ಮದ ಹೆಸರಿನಲ್ಲಿ ದ್ವೇಷ ಹರಡಿ, ಜನರನ್ನು ದಾರಿ ತಪ್ಪಿಸಿ, ಜನರನ್ನು ಒಡೆಯುವ ಮೂಲಕ ದೇಶವನ್ನು ಒಡೆಯಲು ಯತ್ನಿಸುತ್ತಿದ್ದಾರೆ. ಪ್ರಧಾನಿಗೆ ನಿಜವಾಗಿಯೂ ದೇಶದಲ್ಲಿ ಏಕತೆ ಬೇಕಾದರೆ ಅವರು ಮತ್ತು ಅವರ ಪಕ್ಷ ದ್ವೇಷ ಹರಡುವುದನ್ನು ನಿಲ್ಲಿಸಬೇಕು' ಎಂದು ಆಗ್ರಹಿಸಿದರು.