ಬದಿಯಡ್ಕ:'ವ್ಯಂಗ್ಯಚಿತ್ರಗಳು ಸಾಮಾಜಿಕ ನ್ಯೂನತೆಗಳನ್ನು ಹಾಸ್ಯಲೇಪನದ ಮೂಲಕ ತೋರಿಸಿ, ಆದರ ಗಂಭೀರತೆಯನ್ನು ಜನತೆಗೆ, ಇಲಾಖೆಗಳಿಗೆ ಮನ ಮುಟ್ಟುವಂತೆ ನೀಡುತ್ತದೆ. ವ್ಯಂಗ್ಯಚಿತ್ರ ಕಲೆ ಕರಗತವಾಗಬೇಕಾದರೆ, ಭಾವಪೂರ್ಣವಾದ ಚಿತ್ರ ರಚನೆಯ ಜತೆಗೆ ಹಾಸ್ಯ ಪ್ರಜ್ಞೆಯೂ ಬೇಕು. ವಿಚಾರಗಳ ಮಂಡನೆಯೂ ಶಕ್ತಿಯುತವಾಗಿರಬೇಕು' ಎಂದು ವ್ಯಂಗ್ಯಚಿತ್ರಗಾರ, ಪತ್ರಕರ್ತ ವಿರಾಜ್ ಅಡೂರು ಹೇಳಿದರು.
ಅವರು ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ಶನಿವಾರ ನಡೆದ ವ್ಯಂಗ್ಯಚಿತ್ರ ರಚನಾ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಶ್ರೀ ಭಾರತೀ ವಿದ್ಯಾಪೀಠದ ಮುಖ್ಯ ಶಿಕ್ಷಕ ಪಿ. ಸತ್ಯನಾರಾಯಣ ಶರ್ಮ ಉದ್ಘಾಟಿಸಿ ಮಾತನಾಡಿ,'ಕಾರ್ಟೂನ್ ಚಿತ್ರಗಳ ಪ್ರತಿಯೊಂದು ಗೆರೆಗಳೂ ಕೂಡಾ ಅತ್ಯಂತ ಸೂಕ್ಷ್ಮ. ಗೆರೆಗಳ ಮೂಲಕ ವಿಚಾರಗಳ ಅನಾವರಣ ಅದ್ಭುತ' ಎಂದು ಹೇಳಿದರು. ಶಿಕ್ಷಕಿ ಮಮತಾ ಸಾವಿತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ವಂದಿಸಿದರು. ಶಿಬಿರದಲ್ಲಿ ಭಾಗವಹಿಸಿದ್ದ ಅವ್ಯಂಗ್, ವಂಶಿ , ತಸ್ವಿ ಅನಿಸಿಕೆ ಹೇಳಿದರು. ಶಿಬಿರದಲ್ಲಿ 30ಕ್ಕೂ ಹೆಚ್ಚಿನ ಮಕ್ಕಳು ಭಾಗವಹಿಸಿದ್ದರು.