ನವದೆಹಲಿ: ಸಂಬಂಧಗಳು ಮುರಿದು ಬಿದ್ದಿವೆ ಎಂಬ ಕಾರಣಕ್ಕೆ, ಆತ್ಮಹತ್ಯೆಗೆ ಅದೇ ಕುಮ್ಮಕ್ಕು ನೀಡಿದೆ ಎಂಬುದಾಗಿ ಹೇಳಲಾಗದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ತೀರ್ಪು ನೀಡಿದೆ.
ಕಮರುದ್ದೀನ್ ದಸ್ತಗೀರ್ ಸನದಿ ಎಂಬುವವರಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ತೀರ್ಪು ನೀಡಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಮಾತು ಹೇಳಿದೆ.
ಇದು ಸಂಬಂಧ ಮುರಿದು ಬಿದ್ದ ಪ್ರಕರಣವಾಗಿದೆ. ಇಲ್ಲಿ ಯಾವುದೇ ಕ್ರಿಮಿನಲ್ ವರ್ತನೆ ಇಲ್ಲ' ಎಂದೂ ಹೇಳಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಉಜ್ಜಲ್ ಭುಯಾನ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಸನದಿ ವಿರುದ್ಧ ಐಪಿಸಿ ಸೆಕ್ಷನ್ 317(ವಂಚನೆ), 306(ಆತ್ಮಹತ್ಯೆಗೆ ಕುಮ್ಮಕ್ಕು) ಹಾಗೂ 376(ಅತ್ಯಾಚಾರ) ಅಡಿ ಆರೋಪ ಹೊರಿಸಲಾಗಿತ್ತು.
ವಿಚಾರಣಾ ನ್ಯಾಯಾಲಯ ಸನದಿ ಅವರನ್ನು ದೋಷಮುಕ್ತ ಮಾಡಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ವಂಚನೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಸನದಿ ಅವರಿಗೆ ಐದು ವರ್ಷ ಜೈಲು ಶಿಕ್ಷೆ ಹಾಗೂ ₹25 ಸಾವಿರ ದಂಡ ವಿಧಿಸಿ ಹೈಕೋರ್ಟ್ ಆದೇಶಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸನದಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
'21 ವರ್ಷದ ತನ್ನ ಮಗಳು, ಆರೋಪಿಯನ್ನು ಕಳೆದ 8 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಮದುವೆಯಾಗಲು ಆರೋಪಿ ನಿರಾಕರಿಸಿದ್ದರಿಂದ ಮಗಳು 2007ರ ಆಗಸ್ಟ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಳು' ಎಂದು ಮಹಿಳೆಯ ತಾಯಿ ನೀಡಿದ ದೂರಿನ ಅನ್ವಯ ದಾಖಲಾಗಿದ್ದ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
'ಮಹಿಳೆಯ ಮರಣಪೂರ್ವ ಹೇಳಿಕೆಗಳನ್ನು ವಿಶ್ಲೇಷಿಸಿದಾಗ, ಈ ಜೋಡಿ ನಡುವೆ ಯಾವುದೇ ದೈಹಿಕ ಸಂಬಂಧವಿತ್ತು ಎಂಬ ಬಗ್ಗೆಯಾಗಲಿ ಇಲ್ಲವೇ ಆತ್ಮಹತ್ಯೆಗೆ ಕಾರಣವಾದ ವರ್ತನೆ ಕುರಿತು ಆರೋಪ ಇರಲಿಲ್ಲ ಎಂಬುದು ಕಂಡುಬರುತ್ತದೆ' ಎಂದು ತಾವು ಬರೆದ 17 ಪುಟಗಳ ತೀರ್ಪಿನಲ್ಲಿ ನ್ಯಾಯಮೂರ್ತಿ ಮಿತ್ತಲ್ ಹೇಳಿದ್ದಾರೆ.
'ವ್ಯಕ್ತಿ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸದಿದ್ದಲ್ಲಿ, ಐಪಿಸಿ ಸೆಕ್ಷನ್ 306ರಡಿ ಆತನಿಗೆ ಶಿಕ್ಷೆ ವಿಧಿಸಲು ಸಾಧ್ಯ ಇಲ್ಲ' ಎಂದೂ ನ್ಯಾಯಪೀಠ ಹೇಳಿದೆ.