ಕೋಲ್ಕತ್ತಾ : ಪಶ್ಚಿಮ ಬಂಗಾಳದ ಮೂರು ವರ್ಷದ ಪೋರ ಅನೀಶ್ ಸರ್ಕಾರ್ ಫಿಡೆ ಶ್ರೇಯಾಂಕಿತ ಆಟಗಾರನಾಗುವ ಮೂಲಕ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕಿತ ಆಟಗಾರ ಎಂಬ ಹಿರಿಮೆಗೆ ಭಾಜನನಾಗಿದ್ದಾನೆ.
ಶುಕ್ರವಾರ ನಡೆದ ಪಂದ್ಯದಲ್ಲಿ ಆತ 1555ನೇ ಶ್ರೇಯಾಂಕಿತ ಆಟಗಾರನಾಗಿ ಹೊರಹೊಮ್ಮಿದ್ದಾನೆ.
ಆಲ್ ಬೆಂಗಾಲ್ ರ‍್ಯಾಪಿಡ್ ರೇಟಿಂಗ್ ಓಪನ್ 2024 ಪಂದ್ಯಾವಳಿಯ ಮೂಲಕ ಚೆಸ್ ಗೆ ಪದಾರ್ಪಣೆ ಮಾಡಿದ ಅನೀಶ್, 11 ಪಂದ್ಯಗಳಿಂದ 5 ಅಂಕಗಳನ್ನು ಗಳಿಸಿದ. ಇದಕ್ಕೂ ಮುನ್ನ ರ‍್ಯಾಪಿಡ್ ರೇಟಿಂಗ್ ಟೂರ್ನಮೆಂಟ್ ನಲ್ಲಿ 4ನೇ ವಿಶ್ವ ಶ್ರೇಯಾಂಕದ ಭಾರತದ ಗ್ರ್ಯಾಂಡ್ ಮಾಸ್ಟರ್ ಅರ್ಜುನ್ ಎರಿಗೈಸಿ ಎದುರು ಆಡುವ ಮಹತ್ವದ ಅವಕಾಶವನ್ನು ಅನೀಶ್ ಪಡೆದಿದ್ದ.
ಆರಂಭದಲ್ಲಿ ಅರ್ಹತೆ ಪಡೆಯದಿದ್ದರೂ, ಕೊನೆಯ ಕ್ಷಣದಲ್ಲಿ ಬದಲಿ ಆಟಗಾರನಾಗಿ ಅನೀಶ್ ಅವಕಾಶ ಪಡೆದಿದ್ದ. ಈ ಅದೃಷ್ಟದ ಅವಕಾಶವು ಆತನನ್ನು ಉನ್ನತ ಹಂತದ ಪಂದ್ಯಾವಳಿಗೆ ಒಡ್ಡಿಕೊಳ್ಳುವಂತೆ ಮಾಡಿತು ಹಾಗೂ ಅಧಿಕೃತ ಶ್ರೇಯಾಂಕ ಪಡೆಯುವತ್ತ ಆತನನ್ನು ಮುನ್ನಡೆಸಿತು.
ಅರ್ಜುನ್ ಎರಿಗೈಸಿಯೊಂದಿಗಿನ ಪಂದ್ಯದ ನಂತರ ಆತ ವೆಸ್ಟ್ ಬೆಂಗಾಲ್ ಸ್ಟೇಟ್ ಅಂಡರ್-9 ಓಪನ್ ರೇಟಿಂಗ್ 2024ರ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಮಹತ್ವದ ಅವಕಾಶ ಪಡೆದ. ಈ ಪಂದ್ಯಾವಳಿಯಲ್ಲಿ 8 ಪಂದ್ಯಗಳ ಪೈಕಿ 5.5 ಅಂಕ ಗಳಿಸುವ ಮೂಲಕ 140 ಸ್ಪರ್ಧಿಗಳ ಪೈಕಿ 24ನೇ ಸ್ಥಾನ ಪಡೆದ.
ಫೈನಲ್ ಪಂದ್ಯದಲ್ಲಿ ಇಬ್ಬರು ಶ್ರೇಯಾಂಕಿತ ಆಟಗಾರರನ್ನು ಪರಾಭವಗೊಳಿಸುವ ಮೂಲಕ, ಅನೀಶ್ ತನ್ನ ವಯಸ್ಸು ಮತ್ತು ಅನುಭವಕ್ಕೆ ಮೀರಿದ ಸಾಧನೆಯನ್ನು ಪ್ರದರ್ಶಿಸಿದ.
ಫಿಡೆ ಶ್ರೇಯಾಂಕವನ್ನು ಪಡೆಯುವ ಪ್ರಯತ್ನದಲ್ಲಿ ಅಧಿಕೃತ ಶ್ರೇಯಾಂಕ ಪಡೆಯಲು ಬೇಕಾದ ಅಗತ್ಯಗಳಿಗನುಗುಣವಾಗಿ ಮತ್ತಷ್ಟು ಪಂದ್ಯಾವಳಿಗಳಲ್ಲಿ ಪಾಲ್ಗೊಂಡ ಅನೀಶ್ ನ ಯಶಸ್ಸಿನ ಪಯಣವು ವೆಸ್ಟ್ ಬೆಂಗಾಲ್ ಸ್ಟೇಟ್ ಅಂಡರ್-13 ಓಪನ್ ರೇಟಿಂಗ್ 2024ರಲ್ಲಿ ಮುಕ್ತಾಯಗೊಂಡಿತು.