ಬ್ರಿಸ್ಬೇನ್: ಉಭಯ ದೇಶಗಳ ನಡುವಿನ ಗಡಿಯಲ್ಲಿನ 'ಸಂಘರ್ಷದ ಸ್ಥಳ'ದಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ವಿಚಾರದಲ್ಲಿ ಚೀನಾ ಮತ್ತು ಭಾರತ 'ಅಲ್ಪಪ್ರಮಾಣದ ಪ್ರಗತಿ' ಸಾಧಿಸಿವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಭಾನುವಾರ ಹೇಳಿದ್ದಾರೆ.
ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಅವರು, ಬ್ರಿಸ್ಬೇನ್‌ನಲ್ಲಿ ಭಾರತೀಯ ಸಮುದಾಯದೊಂದಿಗೆ ನಡೆಸಿದ ಸಂವಾದದ ವೇಳೆ ಈ ಮಾತು ಹೇಳಿದ್ದಾರೆ.
'ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಗೊಂದಲ ಉಂಟಾಗಿತ್ತು. ಇದಕ್ಕೆ ಏನು ಕಾರಣ ಎಂಬುದು ನಿಮಗೆ ತಿಳಿದೇ ಇದೆ. ಗಡಿಯಿಂದ ಸೇನೆ ವಾಪಸು ಪಡೆಯುವ ವಿಚಾರದಲ್ಲಿ ಎರಡೂ ದೇಶಗಳಿಂದ ಅಲ್ಪಪ್ರಮಾಣದ ಪ್ರಗತಿಯಾಗಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದ್ದಾರೆ.
'ಎರಡೂ ದೇಶಗಳ ಸೈನಿಕ ಮುಖಾಮುಖಿಯಾಗಿದ್ದ ಸನ್ನಿವೇಶ ಸೃಷ್ಟಿಯಾಗಿತ್ತು. ಅದು, ಅಹಿತಕರ ಘಟನೆಗೂ ಕಾರಣವಾಗುವ ಸಾಧ್ಯತೆ ಇತ್ತು. ಈ ವೇಳೆ, ನಾವು ಮಾತುಕತೆ ನಡೆಸಿ, ಸಂಘರ್ಪ ಪೀಡಿತ ಸ್ಥಳಗಳಿಂದ ಸೇನೆ ವಾಪಸ್ ಕರೆಸಿಕೊಳ್ಳುವ ನಿರ್ಧಾರ ಕೈಗೊಂಡೆವು' ಎಂದರು.
'ಸೇನೆ ವಾಪಸು ಕರೆಸಿಕೊಳ್ಳುವ ನಿರ್ಧಾರ ಸ್ವಾಗತಾರ್ಹ ನಡೆಯಾಗಿದ್ದು, ಈ ವಿಷಯದಲ್ಲಿ ಸ್ವಲ್ಪ ಪ್ರಮಾಣದ ಪ್ರಗತಿಯಾಗಿದೆ. ಇದು ಎರಡೂ ದೇಶಗಳ ಸಂಬಂಧ ಸುಧಾರಣೆಗೆ ಇರುವ ಹಲವು ಸಾಧ್ಯತೆಗಳನ್ನು ತೆರೆಯಲಿದೆ' ಎಂದು ಹೇಳಿದ್ದಾರೆ.
'2020ಕ್ಕೂ ಮುಂಚೆ ಇದ್ದಿರದಷ್ಟು ಭಾರಿ ಸಂಖ್ಯೆಯಲ್ಲಿ, ವಾಸ್ತವ ನಿಯಂತ್ರಣ ರೇಖೆ(ಎಲ್‌ಎಸಿ) ಉದ್ದಕ್ಕೂ ಚೀನಾ ತನ್ನ ಯೋಧರನ್ನು ನಿಯೋಜಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ ಕೂಡ ತನ್ನ ಯೋಧರನ್ನು ನಿಯೋಜಿಸಿತ್ತು. ಈ ಅವಧಿಯಲ್ಲಿ, ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಮಾತ್ರವಲ್ಲದೇ, ಇತರ ವಿಚಾರಗಳ ಮೇಲೂ ಪರಿಣಾಮ ಉಂಟಾಗಿತ್ತು' ಎಂದೂ ಹೇಳಿದ್ದಾರೆ.