HEALTH TIPS

ನೊಣದ ಸಹಾಯದಿಂದ ಕೊಲೆ ಆರೋಪಿ ಸೆರೆ! ಮಧ್ಯಪ್ರದೇಶದಲ್ಲಿ ಹೀಗೊಂದು ಘಟನೆ



        ಬಲ್ಪುರ: ಶಂಕಿತನ ಅಂಗಿ ಮೇಲಿದ್ದ ನೊಣಗಳು ಕೊಲೆ ಪ್ರಕರಣವೊಂದರ ರಹಸ್ಯ ಭೇದಿಸಲು ಪೊಲೀಸರಿಗೆ ನೆರವಾಗಿವೆ.   ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯಲ್ಲಿ ಈ ಕೊಲೆ ನಡೆದಿತ್ತು.

        ಹಣಕಾಸು ವಿಚಾರವಾಗಿ ಸೃಷ್ಟಿಯಾದ ವಿವಾದದಿಂದಾಗಿ, ತನ್ನ ಚಿಕ್ಕಪ್ಪ ಮನೋಜ್‌ ಠಾಕೂರ್‌ (26) ಎಂಬುವವರನ್ನು ಕೊಲೆ ಮಾಡಿದ್ದ ಆರೋಪದಡಿ ಧರಮ್‌ ಠಾಕೂರ್‌ ಎಂಬುವವರನ್ನು ಬಂಧಿಸಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಸೋನಾಲಿ ದುಬೆ ಸುದ್ದಿಗಾರರಿಗೆ ತಿಳಿಸಿದ್ದಾರೆ.

       'ಆರೋಪಿಯು ಕೆಲಸಕ್ಕಾಗಿ ಅಕ್ಟೋಬರ್‌ 30ರಂದು ಬೆಳಿಗ್ಗೆ ಮನೆಯಿಂದ ತೆರಳಿದ್ದ. ರಾತ್ರಿವರೆಗೂ ಮನೆಗೆ ಮರಳಿರಲಿಲ್ಲ. ಮನೋಜ್‌ ಅವರ ಮೃತದೇಹ ದೇವರಿ ತಪ್ರಿಯಾ ಗ್ರಾಮದ ಹೊಲವೊಂದರಲ್ಲಿ ಅ.31ರಂದು ಪತ್ತೆಯಾಗಿತ್ತು' ಎಂದು ಅವರು ತಿಳಿಸಿದ್ದಾರೆ.

          'ಚರಗಾವಾ ಪಟ್ಟಣದ ಮಾರುಕಟ್ಟೆ ಪ್ರದೇಶದಲ್ಲಿ ಮನೋಜ್‌ ಅವರೊಂದಿಗೆ ಕೊನೆವರೆಗೆ ಆರೋಪಿ ಮಾತ್ರ ಇದ್ದ ಎಂಬುದು ಗೊತ್ತಾಗಿದೆ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ ನಂತರ, ಕೃತ್ಯಕ್ಕೆ ಬಳಸಿದ್ದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ದುಬೆ ಹೇಳಿದರು.

         'ಹತ್ಯೆ ನಡೆದ ಸ್ಥಳದಲ್ಲಿ ಕಂಡುಬಂದಿದ್ದ ಜನಜಂಗುಳಿಯಲ್ಲಿ ಆರೋಪಿಯೂ ಇದ್ದ. ಆತನ ಕಣ್ಣುಗಳು ಕೆಂಪಗಾಗಿದ್ದವು ಹಾಗೂ ಎದೆ ಮೇಲೆ ಕೆಲ ಗುರುತುಗಳೂ ಇದ್ದವು' ಎಂದು ಚರಗಾವಾ ಠಾಣೆ ಪೊಲೀಸ್‌ ಅಧಿಕಾರಿ ಅಭಿಷೇಕ್ ಪ್ಯಾಸಿ ಹೇಳಿದರು.

            'ಯಾವ ಪ್ರದೇಶಗಳಲ್ಲಿ ಓಡಾಡಿದ್ದೆ ಎಂಬ ಬಗ್ಗೆ ಆರೋಪಿಯನ್ನು ಪ್ರಶ್ನಿಸಲಾಯಿತು. ಈ ವೇಳೆ, ಆತನ ಅಂಗಿ ಮೇಲೆ ನೊಣಗಳು ಇದ್ದುದನ್ನು ಗಮನಿಸಿದೆ. ಅಂಗಿ ಮೇಲಿನ ರಕ್ತದ ಕಲೆಗಳ ಮೇಲೆಯೇ ನೊಣಗಳು ಕುಳಿತಿರುವ ಬಗ್ಗೆ ಶಂಕೆ ಮೂಡಿತು. ಆದರೆ, ಆತ ಕಪ್ಪು ಬಣ್ಣದ ಅಂಗಿ ಧರಿಸಿದ್ದರಿಂದ ರಕ್ತದ ಕಲೆಗಳು ಸ್ಪಷ್ಟವಾಗಿ ಕಾಣುತ್ತಿರಲಿಲ್ಲ' ಎಂದು ಪ್ಯಾಸಿ ಹೇಳಿದರು.

            'ವಿಧಿವಿಜ್ಞಾನ ತಜ್ಞರಿಂದ ಆರೋಪಿಯ ಅಂಗಿಯನ್ನು ಪರೀಕ್ಷೆಗೆ ಒಳಪಡಿಸಿದ ನಂತರ, ಆತನೇ ಕೊಲೆ ಮಾಡಿರುವ ಶಂಕೆ ಬಲವಾಯಿತು. ಮೊದಲಿಗೆ ಅದನ್ನು ಒಪ್ಪಿಕೊಳ್ಳದ ಆರೋಪಿ ನಂತರ, ಚಿಕ್ಕಪ್ಪನ ಕೊಲೆಯನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡ' ಎಂದು ಹೇಳಿದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries