ಲಖನೌ: 1857ರಲ್ಲಿ ನಡೆದಿದ್ದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಳಕೆಯಾಗಿದ್ದ ಹಲವು ಶಸ್ತ್ರಾಸ್ತ್ರಗಳು ಉತ್ತರಪ್ರದೇಶದ ಶಹಜಹಾನ್‌ಪುರದಲ್ಲಿ ಪತ್ತೆಯಾಗಿವೆ.
'ಧಕಿಯತೆವಾರಿ ಗ್ರಾಮದ ರೈತ ಬಾಬು ರಾಮ್ ಅವರು ಕೆಲವು ದಿನಗಳ ಹಿಂದೆ ತಮ್ಮ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ತುಕ್ಕು ಹಿಡಿದಿರುವ 20 ಕತ್ತಿಗಳು, 10 ಬಂದೂಕುಗಳ ನಳಿಕೆಗಳು, ಎರಡು ದೇಶಿ ನಿರ್ಮಿತ ಪಿಸ್ತೂಲ್‌ಗಳು ಮತ್ತು ಒಂದು ಈಟಿ ಪತ್ತೆಯಾಗಿದೆ' ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'2011ರಲ್ಲಿ ಇದೇ ಗ್ರಾಮದ ಕುಟುಂಬವೊಂದರಿಂದ ಜಮೀನನ್ನು ಖರೀದಿಸಿದ್ದೆ, ಆ ವೇಳೆ ಅಲ್ಲಿ ದಿಬ್ಬಗಳಿದ್ದವು' ಎಂದು ರೈತ ಬಾಬು ರಾಮ್ ತಿಳಿಸಿದ್ದಾರೆ.
'ಪತ್ತೆಯಾಗಿರುವ ಆಯುಧಗಳು 150ರಿಂದ 200 ವರ್ಷ ಹಳೆಯದಾಗಿರಬಹುದು' ಎಂದು ಸ್ಥಳೀಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 'ಕತ್ತಿಗಳಿಗೆ ಬೆಳ್ಳಿಯ ಹಿಡಿಕೆಗಳಿವೆ. ಬಂದೂಕುಗಳ ನಳಿಕೆಗಳು ಮಾತ್ರ ಪತ್ತೆಯಾಗಿವೆ. ಅದರ ಮರದ ಭಾಗಗಳನ್ನು ಗೆದ್ದಲು ಹುಳುಗಳು ತಿಂದಿರಬಹುದು' ಎಂದು ಸ್ಥಳೀಯ ಕಾಲೇಜಿನ ಇತಿಹಾಸ ಉಪನ್ಯಾಸಕ ಡಾ.ದೀಪಕ್ ಸಿಂಗ್ ಅವರು ಹೇಳಿದ್ದಾರೆ.
'ಸಮೀಪದ ಪ್ರದೇಶಗಳಲ್ಲಿ ಹರಪ್ಪ ನಾಗರಿಕತೆಯ ಕೆಲ ಆಯುಧಗಳು ಇತ್ತೀಚೆಗೆ ಪತ್ತೆಯಾಗಿದ್ದವು. ಅಧ್ಯಯನಕ್ಕಾಗಿ ಕೆಲ ಕತ್ತಿಗಳನ್ನು ನೀಡುವಂತೆ ಸ್ಥಳೀಯಾಡಳಿತಕ್ಕೆ ಮನವಿ ಮಾಡಿದ್ದೇವೆ' ಎಂದು ತಜ್ಞರು ತಿಳಿಸಿದ್ದಾರೆ.
'ಆಯುಧಗಳು ಪತ್ತೆಯಾಗಿರುವ ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಕಳುಹಿಸಲಾಗಿದ್ದು, ಈ ಬಗ್ಗೆ ಶೀಘ್ರದಲ್ಲೇ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ವರದಿ ನೀಡಲಾಗುವುದು' ಎಂದು ತಿಹಾರ್‌ನ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಜೀತ್ ಸಿಂಗ್ ರೈ ಅವರು ಹೇಳಿದ್ದಾರೆ.
ಪತ್ತೆಯಾಗಿರುವ ಆಯುಧಗಳನ್ನು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಿತ್ಯ ಸುದ್ದಿಗಳಿಗಾಗಿ ಸಮರಸ ಸುದ್ದಿ. ಡಾಟ್ ಕಾಂ ಗೆ ಭೇಟಿ ನೀಡಿ.
ಜನಪರ, ಕ್ರಿಯಾತ್ಮಕ ಮಾಧ್ಯಮಗಳಿಗೆ ಜನಬೆಂಬಲ ಅಗತ್ಯ
ನಿತ್ಯ ಸತ್ಯದೊಂದಿಗೆ ಧನಾತ್ಮಕ ಸಮಾಜ ನಿರ್ಮಾಣದ ಲಕ್ಷ್ಯವಿರಿಸಿ ಮುನ್ನಡೆಯುತ್ತಿರುವ ಸಮರಸ ಸುದ್ದಿ ಬಳಗಕ್ಕೆ ನಿಮ್ಮ ಬೆಂಬಲ ಅತ್ಯಗತ್ಯ.
ಸಮರಸ ಸುದ್ದಿ.ಡಾಟ್ ಕಾಮ್ ಗೆ ದೇಣಿಗೆ ನೀಡಿ ಹೆಗಲು ನೀಡಿ.
ಈ ಕೆಳಗಿನ ಸ್ಕ್ಯಾನರ್ ಮೂಲಕ ಗೂಗಲ್ ಪೇ-ಪೋನ್ ಫೇ ಮಾಡಲು ಕ್ಲಿಕ್ ಮಾಡಿ
ಇದು ಗಡಿನಾಡು ಕಾಸರಗೋಡಿನ ಜನಧ್ವನಿ.