ನವದೆಹಲಿ: 'ಅಮೆರಿಕ ಕೋರ್ಟ್‌ನಲ್ಲಿರುವ ಅದಾನಿ ಪ್ರಕರಣದ ಆರೋಪಪಟ್ಟಿಯಲ್ಲಿ ಯಾರು ಲಂಚ ನೀಡಿದರು ಎಂಬ ಆರೋಪದ ವಿವರವೇ ಇಲ್ಲ' ಎಂದು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ತಿಳಿಸಿದ್ದಾರೆ.
ಅದಾನಿ ಸಮೂಹದ ಸ್ಥಾಪಕ ಅಧ್ಯಕ್ಷ ಗೌತಮ್ ಅದಾನಿ, ಅವರ ಅಣ್ಣನ ಮಗ ಸಾಗರ್ ಅದಾನಿ ವಿರುದ್ಧದ ಲಂಚದ ಪ್ರಕರಣದಲ್ಲಿ ಅಮೆರಿಕದ ವಿದೇಶಿ ಭ್ರಷ್ಟಾಚಾರ ಚಟುವಟಿಕೆ ತಡೆ ಕಾಯ್ದೆ (ಎಫ್‌ಸಿಪಿಎ) ಉಲ್ಲಂಘಿಸಿದ ಆರೋಪವೇ ಇಲ್ಲ ಎಂದಿದ್ದಾರೆ.
ಸೋಲಾರ್ ಇಂಧನ ಒಪ್ಪಂದದಲ್ಲಿ ಅದಾನಿ ಭಾರತದ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಆರೋಪವಿದೆ. ಆದರೆ, ಯಾವ ಸ್ವರೂಪದಲ್ಲಿ ಲಂಚ ನೀಡಿದರು ಎಂಬ ಉಲ್ಲೇಖವಿಲ್ಲ ಎಂದಿದ್ದಾರೆ.
'ಯಾರಿಗೆ, ಯಾವ ಸ್ವರೂಪದಲ್ಲಿ ನೀಡಲಾಯಿತು, ಅವರು ಯಾವ ಇಲಾಖೆಗೆ ಸೇರಿದವರು ಎಂಬ ಸ್ಪಷ್ಟ ವಿವರವೇ ಆರೋಪಪಟ್ಟಿಯಲ್ಲಿ ಇಲ್ಲ' ಎಂದಿದ್ದಾರೆ. ಈ ದೋಷರೋಪಕ್ಕೆ ಆಧಾರವೇನು ಎಂದೂ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಟೀಕೆ: ಅದಾನಿ ವಿರುದ್ಧದ ಲಂಚ ಆರೋಪದ ಕುರಿತು ವಕೀಲರಾದ ಮಹೇಶ್ ಜೇಠ್ಮಲಾನಿ ಮತ್ತು ಮುಕುಲ್ ರೋಹಟಗಿ ಅವರ ಹೇಳಿಕೆಗಳು ಆರೋಪಗಳ ಗಂಭೀರತೆ ದುರ್ಬಲಗೊಳಿಸುವ ಪ್ರಯತ್ನ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನಗಳ ಉಸ್ತುವಾರಿ) ಜೈರಾಮ್ ರಮೇಶ್ ಅವರು, 'ಈ ಕ್ಷಣವನ್ನು ಇತಿಹಾಸವು ಕ್ಷಮಿಸುವುದಿಲ್ಲ ಅಥವಾ ಮರೆಯುವುದಿಲ್ಲ' ಎಂದು ಪ್ರತಿಪಾದಿಸಿದ್ದಾರೆ.