ರಿಯೊ ಡಿಜನೈರೊ: ಭಾರತದ ಬ್ಯಾಂಕುಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಎದುರಿಸುತ್ತಿರುವ ಉದ್ಯಮಿಗಳಾದ ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಅವರನ್ನು ಹಸ್ತಾಂತರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಅವರನ್ನು ಒತ್ತಾಯಿಸಿದ್ದಾರೆ.

ಜಿ20 ಶೃಂಗಸಭೆ ಸಂದರ್ಭದಲ್ಲಿ ನಡೆದ ಮಾತುಕತೆ ವೇಳೆ, ಮೋದಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.
ಬ್ರಿಟನ್ ಪ್ರಧಾನಿಯಾಗಿ ಸ್ಟಾರ್ಮರ್ ಅಧಿಕಾರ ವಹಿಸಿಕೊಂಡ ನಂತರ, ಇದು ಉಭಯ ನಾಯಕರ ನಡುವಿನ ಮೊದಲ ಭೇಟಿಯಾಗಿದೆ.
ಎಫ್‌ಟಿಎ: ಭಾರತ ಮತ್ತು ಬ್ರಿಟನ್ ನಡುವಿನ ಮುಕ್ತ ವ್ಯಾಪಾರ ಒಪ್ಪಂದ (ಎಫ್‌ಟಿಎ) ಕುರಿತಂತೆ ಮುಂದಿನ ವರ್ಷ ಮತ್ತೆ ಸಮಾಲೋಚನೆಗಳಿಗೆ ಚಾಲನೆ ನೀಡಲು ಮೋದಿ ಹಾಗೂ ಸ್ಟಾರ್ಮರ್ ಒಪ್ಪಿದ್ದಾರೆ.
'ಸಮತೋಲಿತ, ಪರಸ್ಪರ ಪ್ರಯೋಜನವಾಗುವ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುವುದು ಸೇರಿದಂತೆ ಇತರ ಎಲ್ಲ ವಿಚಾರಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಉಭಯ ನಾಯಕರು ಸಮ್ಮತಿಸಿದರು' ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಮುಕ್ತ ವ್ಯಾಪಾರ ಒಪ್ಪಂದ ಕುರಿತು ಬ್ರಿಟನ್ ಮತ್ತು ಭಾರತ ನಡುವೆ 2022ರಲ್ಲಿ ಸಮಾಲೋಚನೆ ಆರಂಭವಾಯಿತು. ಈವರೆಗೆ 14 ಸುತ್ತು ಮಾತುಕತೆ ನಡೆದಿವೆ.
ಹೊಸ ಕಾನ್ಸುಲೇಟ್ ಕಚೇರಿ: ಬ್ರಿಟನ್‌ನ ಬೆಲ್‌ಫಾಸ್ಟ್ ಹಾಗೂ ಮ್ಯಾಂಚೆಸ್ಟರ್‌ನಲ್ಲಿ ಭಾರತದ ಕಾನ್ಸುಲೇಟ್ ಕಚೇರಿಗಳನ್ನು ಆರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಇದೇ ವೇಳೆ ಘೋಷಿಸಿದ್ದಾರೆ.