ಜ್ಯೆಪುರ: ಅಜ್ಮೀರ್‌ದಲ್ಲಿರುವ, ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ ದರ್ಗಾ ಒಳಗಡೆ ಶಿವನ ದೇವಸ್ಥಾನವಿದೆ ಎಂಬುದಾಗಿ ಸಲ್ಲಿಸಲಾಗಿರುವ ಅರ್ಜಿಗೆ ಸಂಬಂಧಿಸಿ ಮೂರು ಕಕ್ಷಿದಾರರಿಗೆ ಸ್ಥಳೀಯ ನ್ಯಾಯಾಲಯವೊಂದು ನೋಟಿಸ್ ಜಾರಿ ಮಾಡಿದ ಬೆನ್ನಲ್ಲೇ, ಗುರುವಾರ ಚರ್ಚೆ, ಜಟಾಪಟಿ ತೀವ್ರಗೊಂಡಿದೆ.
ಈ ಬೆಳವಣಿಗೆ ಆತಂಕಕಾರಿ', 'ನೋವಿನ ಸಂಗತಿ' ಎಂಬ ಬೇಸರದ ಮಾತುಗಳಿಂದ ಹಿಡಿದು, 'ಸಮೀಕ್ಷೆ ನಡೆದರೆ ಸಮಸ್ಯೆ ಏನು?' ಎಂಬ ವಾದಗಳು ಕೇಳಿಬಂದಿವೆ.
ಈ ವಿಚಾರವಾಗಿ ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶ ಮನಮೋಹನ್ ಚಂದೇಲ್, ನೋಟಿಸ್ ಜಾರಿ ಮಾಡಿದ್ದಾರೆ.
ಹಿಂದೂ ಸೇನಾ ಸಂಘಟನೆ ಮುಖಂಡ ವಿಷ್ಣು ಗುಪ್ತ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ಡಿಸೆಂಬರ್ 20ಕ್ಕೆ ಮುಂದೂಡಲಾಗಿದೆ.
'ಕೋಮು ಸೌಹಾರ್ದ ಕದಡುವ ಯತ್ನ': ಸೂಫಿ ಸಂತ ಮೊಯಿನುದ್ದೀನ್ ಚಿಶ್ತಿ (ಖ್ವಾಜಾ ಗರೀಬ್ ನವಾಜ್) ದರ್ಗಾವನ್ನು ಶಿವನ ದೇಗುಲ ಎಂಬುದಾಗಿ ಘೋಷಿಸುವಂತೆ ಅರ್ಜಿ ಸಲ್ಲಿಸಿರುವುದನ್ನು ದರ್ಗಾ ಉಸ್ತುವಾರಿಗಳ ಸಮಿತಿ ಸದಸ್ಯರು (ಖಾದಿಮ್‌ಗಳು) ಖಂಡಿಸಿದ್ದಾರೆ.
'ಈ ನಡೆಯು ಮುಸ್ಲಿಮರನ್ನು ಸಮಾಜದಿಂದ 'ಪ್ರತ್ಯೇಕಿಸುವುದು' ಹಾಗೂ ದೇಶದಲ್ಲಿನ ಸೌಹಾರ್ದವನ್ನು ಹಾಳು ಮಾಡುವ ಪ್ರಯತ್ನವಾಗಿದೆ' ಎಂದು ದರ್ಗಾದ ಖಾದಿಮ್‌ರನ್ನು ಪ್ರತಿನಿಧಿಸುವ ಅಂಜುಮಾನ್ ಸೈಯದ್ ಜದ್ಗಾನ್‌ನ ಕಾರ್ಯದರ್ಶಿ ಸೈಯದ್ ಸರ್ವಾರ್ ಚಿಶ್ತಿ ಹೇಳಿದ್ದಾರೆ.
'ಈ ದರ್ಗಾ ಅಲ್ಪಸಂಖ್ಯಾತರ ವ್ಯವಹಾರ ಸಚಿವಾಲಯದಡಿ ಬರಲಿದ್ದು, ಎಎಸ್‌ಐಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ' ಎಂದಿರುವ ಅವರು, 'ಈ ಪ್ರಕರಣದಲ್ಲಿ ಅಂಜುಮಾನ್ ಸೈಯದ್ ಜದ್ಗಾನ್ ಅನ್ನು ಸಹ ಪಕ್ಷಗಾರವಾಗಿ ಮಾಡಬೇಕು' ಎಂದು ಆಗ್ರಹಿಸಿದ್ದಾರೆ.
'ಸಮಸ್ಯೆ ಏನು?': 'ಈ ವಿಚಾರವಾಗಿ ಜಟಾಪಟಿ ನಡೆಯುತ್ತಿರುವುದು ಅಚ್ಚರಿ ತಂದಿದೆ' ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದಾರೆ.
'ಅಜ್ಮೀರ್ ದರ್ಗಾದಲ್ಲಿ ಸಮೀಕ್ಷೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯವೇ ಆದೇಶ ಹೊರಡಿಸಿರುವಾಗ ಸಮಸ್ಯೆ ಏನು' ಎಂದು ಅವರು ಪ್ರಶ್ನಿಸಿದ್ದಾರೆ.
'ಮೊಘಲರು ಭಾರತಕ್ಕೆ ಬಂದಿದ್ದು, ದೇವಾಲಯಗಳನ್ನು ಧ್ವಂಸಗೊಳಿಸಿದ್ದು ಸತ್ಯ ಸಂಗತಿ. ಕಾಂಗ್ರೆಸ್ ಪಕ್ಷ ಇದುವರೆಗೆ ಓಲೈಕೆ ಮಾಡುತ್ತಾ ಬಂದಿದೆ. 1947ರಲ್ಲಿ ಜವಾಹರಲಾಲ್ ನೆಹರೂ ಅವರು ಇಂತಹ ಸಮಸ್ಯೆಗಳನ್ನು ಬಗೆಹರಿಸಿದ್ದರೆ, ಕೋರ್ಟ್ ಮೆಟ್ಟಿಲೇರುವ ಅಗತ್ಯವೇ ಇರುತ್ತಿರಲಿಲ್ಲ' ಎಂದು ಹೇಳಿದ್ದಾರೆ.
ಇಂತಹ ಬೆಳವಣಿಗೆಗಳಿಗೆ ಸಂಬಂಧಿಸಿ, ನಿವೃತ್ತ ಸಿಜೆಐ ಡಿ.ವೈ.ಚಂದ್ರಚೂಡ್ ಅವರತ್ತಲೇ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಬೊಟ್ಟು ಮಾಡಿದ್ದಾರೆ.
'ನಿವೃತ್ತ ಸಿಜೆಐ ನೀಡಿದ ತೀರ್ಪಿನಿಂದಾಗಿ ಅಲ್ಪಸಂಖ್ಯಾತರ ಧಾರ್ಮಿಕ ಸ್ಥಳಗಳ ಕುರಿತು ವಿವಾದಗಳು ಉದ್ಭವಿಸುವಂತಾಗಿದೆ' ಎಂದು ಮುಫ್ತಿ ದೂರಿದ್ದಾರೆ.
'ಪೂಜಾಸ್ಥಳಗಳ ವಿಚಾರವಾಗಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ನ ತೀರ್ಪು ಇದ್ದರೂ, ಚಂದ್ರಚೂಡ್ ನೀಡಿದ ತೀರ್ಪುಗಳು ಮುಸ್ಲಿಮರ ಧಾರ್ಮಿಕ ಸ್ಥಳಗಳ ಸಮೀಕ್ಷೆಗೆ ದಾರಿ ಮಾಡಿಕೊಟ್ಟವು. ಹಿಂದೂ ಮತ್ತು ಮುಸ್ಲಿಮರ ನಡುವೆ ಸಂಘರ್ಷಕ್ಕೂ ಕಾರಣವಾದವು' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿವಾದಿಗಳು: 'ಅಜ್ಮೀರ್ ದರ್ಗಾ ಸಮಿತಿ, ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಹಾಗೂ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಸ್‌ಎಸ್‌ಎ)ಯನ್ನು ಪ್ರತಿವಾದಿಗಳನ್ನಾಗಿ ಮಾಡಿ, ನೋಟಿಸ್ ನೀಡಲಾಗಿದೆ' ಎಂದು ಎಂದು ಅರ್ಜಿದಾರರ ಪರ ವಕೀಲ ಯೋಗೇಶ್ ಸಿರೋಜಾ ಹೇಳಿದ್ದಾರೆ.
ಅರ್ಜಿದಾರರ ವಾದ: 'ಒಳಗೆ ಶಿವನ ದೇವಸ್ಥಾನ ಇದ್ದು, ಅಜ್ಮೀರ್ ದರ್ಗಾವನ್ನು ಸಂಕಟಮೋಚನ ಮಹಾದೇವ ದೇವಸ್ಥಾನ ಎಂದು ಘೋಷಿಸಬೇಕು. ದರ್ಗಾ ಏನಾದರೂ ನೋಂದಣಿ ಮಾಡಿಸಿದ್ದಲ್ಲಿ, ಅದನ್ನು ರದ್ದು ಮಾಡಬೇಕು' ಎಂಬುದು ನಮ್ಮ ಬೇಡಿಕೆಯಾಗಿದೆ ಎಂದು ಅರ್ಜಿದಾರ ವಿಷ್ಣು ಗುಪ್ತ ಹೇಳಿದ್ದಾರೆ.
'ದರ್ಗಾ ಇರುವ ಸ್ಥಳದಲ್ಲಿ ಮೊದಲು ಶಿವನ ದೇಗುಲ ಇತ್ತು. ನಂತರ, ಇಲ್ಲಿ 13ನೇ ಶತಮಾನದ ಸೂಫಿ ಸಂತ, ಪರ್ಷಿಯಾದ ಖ್ವಾಜಾ ಮೊಯಿನುದ್ದೀನ್ ಚಿಶ್ತಿ ಅವರ ದರ್ಗಾ ನಿರ್ಮಿಸಲಾಯಿತು. ಇದಕ್ಕೆ ಐತಿಹಾಸಿಕ ಸಾಕ್ಷ್ಯಗಳಿವೆ' ಎಂದು ಅವರು ಅರ್ಜಿಯಲ್ಲಿ ಹೇಳಿದ್ದಾರೆ.
'ದರ್ಗಾದಲ್ಲಿ ಎಎಸ್‌ಐನಿಂದ ಸಮೀಕ್ಷೆ ನಡೆಸಬೇಕು ಹಾಗೂ ಆ ಸ್ಥಳದಲ್ಲಿ ಹಿಂದೂಗಳಿಗೆ ಪೂಜೆ ಸಲ್ಲಿಸುವ ಹಕ್ಕು ನೀಡಬೇಕು ಎಂಬುದು ಕೂಡ ನಮ್ಮ ಬೇಡಿಕೆ' ಎಂದಿದ್ದಾರೆ.