ಬೈರೂತ್: ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಪಡೆಗಳ ಆಕ್ರಮಣ ಮುಂದುವರಿದಿದ್ದು, ಲೆಬನಾನ್ ರಾಜಧಾನಿ ಬೈರೂತ್‌ನ ಉಪನಗರಗಳ ಮೇಲೆ ಶುಕ್ರವಾರ ಮತ್ತೆ ದಾಳಿ ನಡೆಸಿದೆ.
ಲೆಬನಾನ್ ವಿಶ್ವವಿದ್ಯಾಲಯದ ಸಮೀಪ ಹಾಗೂ ಬುರ್ಜ್ ಅಲ್ ಬರಜ್‌ನೆಹ್‌ನಲ್ಲಿ ಇಸ್ರೇಲ್ ವಾಯುದಾಳಿ ನಡೆಸಿದೆ ಎಂದು ಲೆಬನಾನ್‌ನ ಸರ್ಕಾರಿ ಮಾಧ್ಯಮ ಹೇಳಿದೆ.
ಎಚ್ಚರಿಕೆ ನೀಡದೆಯೇ ಅಲ್-ಜಾಮೌಸ್ ಮೇಲೂ ಇಸ್ರೇಲ್ ದಾಳಿ ನಡೆಸಿದೆ ಎಂದು ಅದು ಹೇಳಿದೆ. ದಾಳಿಯ ಭೀಕರ ಶಬ್ದ ಬೈರೂತ್‌ನಾದ್ಯಂತ ಕೇಳಿಸಿದೆ. ನಗರದ ಮೇಲೆ ದಟ್ಟ ಹೊಗೆ ಆವರಿಸಿದೆ. ದಾಳಿಯಿಂದಾದ ಸಾವು ನೋವಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಸೆಪ್ಟೆಂಬರ್‌ನಿಂದ ಹಿಜ್ಬುಲ್ಲಾ ಬಂಡುಕೋರರನ್ನು ಗುರಿಯಾಗಿಸಿಕೊಂಡು ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಡೆಸುತ್ತಿದೆ. ಸೆಪ್ಟೆಂಬರ್ 23ರಿಂದ ಈವರೆಗೆ ಇಸ್ರೇಲ್ ಪಡೆಗಳ ಆಕ್ರಮಣಕ್ಕೆ 2,600 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಸಚಿವ ಫಿರಾಸ್ ಆಬಿದ್ ಹೇಳಿದ್ದಾರೆ.