ನವದೆಹಲಿ :ಲೈಂಗಿಕ ಕಳ್ಳಸಾಗಣೆ ಸಂತ್ರಸ್ತರಿಗೆ ಸಮಗ್ರ ಪುನರ್ವಸತಿ ಚೌಕಟ್ಟು ರೂಪಿಸಲು ಶಾಸನಾತ್ಮಕ ನಿರ್ವಾತವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಸಮಸ್ಯೆಯನ್ನು ಪರಿಗಣಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಪ್ರಮಾಣ ಪತ್ರ ಸಲ್ಲಿಸುವಂತೆಯೂ ಸೂಚಿಸಿದೆ.
"ಮಾನವ ಮತ್ತು ಲೈಂಗಿಕ ಕಳ್ಳಸಾಗಣೆಯು ಸಂತ್ರಸ್ತರನ್ನು ಅಮಾನುಷಗೊಳಿಸುತ್ತದೆ. ಸಂತ್ರಸ್ತರ ಜೀವನ, ಸ್ವಾತಂತ್ರ್ಯ ಹಾಗೂ ಖಾಸಗಿ ಭದ್ರತೆಯ ಹಕ್ಕನ್ನು ಉಲ್ಲಂಘಿಸುತ್ತದೆ. ಸಮಾಜದ ದುರ್ಬಲ ವರ್ಗಗಳು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಇಂತಹ ಅಪರಾಧ ಚಟುವಟಿಕೆಗಳಲ್ಲಿ ಹೆಚ್ಚು ದುಷ್ಪರಿಣಾಮಕ್ಕೊಳಗಾಗುತ್ತಿದ್ದಾರೆ" ಎಂದು ನ್ಯಾ. ಜೆ.ಬಿ.ಪರ್ದಿವಾಲಾ ಹಾಗೂ ನ್ಯಾ. ಪಂಕಜ್ ಮಿಥಲ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿತು.
ಇಂತಹ ಅಪರಾಧ ಚಟುವಟಿಕೆಗಳಲ್ಲಿ ಕಳ್ಳ ಸಾಗಣೆದಾರರು ಸಂತ್ರಸ್ತರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಹಾಗೂ ಸಂತ್ರಸ್ತರು ತಮ್ಮ ಮೇಲೆ ಕೆಟ್ಟ ಪ್ರಭಾವ ಬೀರುವ ದೈಹಿಕ ಮತ್ತು ಮಾನಸಿಕ ಹಿಂಸೆಗೊಳಗಾಗಬೇಕಾಗುತ್ತದೆ ಎಂದೂ ನ್ಯಾಯಾಲಯ ಹೇಳಿತು.
"ಸಂತ್ರಸ್ತರು ಗಂಭೀರ ಸ್ವರೂಪದ ಜೀವಾಪಾಯದ ಗಾಯಗಳನ್ನು ಅನುಭವಿಸುವುದರೊಂದಿಗೆ, ಲೈಂಗಿಕವಾಗಿ ಹರಡುವ ರೋಗಗಳು ಸೇರಿದಂತೆ ಸಾಂಕ್ರಾಮಿಕ ಅಸ್ವಸ್ಥತೆಗೆ ತುತ್ತಾಗುತ್ತಾರೆ", ಎಂದೂ ನ್ಯಾಯಾಲಯ ಅಭಿಪ್ರಾಯ ಪಟ್ಟಿತು.
"ಇದರೊಂದಿಗೆ, ಗಾಬರಿ ಸಮಸ್ಯೆಗಳು, ಪಿಟಿಎಸ್ಡಿ, ಖಿನ್ನತೆ ಇತ್ಯಾದಿಯಂತಹ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಯೂ ಇದೆ" ಎಂದು ನ್ಯಾಯಪೀಠ ಹೇಳಿತು.
"ಇಂತಹ ಬಹುತೇಕ ಸಂತ್ರಸ್ತರಿಗೆ ನಿರಂತರವಾಗಿ ವೈದ್ಯರು ಹಾಗೂ ಇನ್ನಿತರ ಆರೋಗ್ಯ ವೃತ್ತಿಪರರ ಸಂಪರ್ಕ ಅಗತ್ಯವಿದ್ದು, ಅವರ ನಿರ್ದಿಷ್ಟ ಅಗತ್ಯಗಳನ್ನು ಒದಗಿಸಬೇಕಾಗುತ್ತದೆ" ಎಂದೂ ಹೇಳಿತು.
"ಏಕಾಂಗಿತನ ಹಾಗೂ ಸಾಮಾಜಿಕ ಬಹಿಷ್ಕಾರಗಳೂ ಕೂಡಾ ಇಂತಹ ಅಪರಾಧಗಳೊಂದಿಗೆ ಸಹಜವಾಗಿ ಬೆರೆತಿವೆ. ಕಳ್ಳ ಸಾಗಣೆಗೊಳಗಾದ ವ್ಯಕ್ತಿಗಳು ಪದೇ ಪದೇ ತಮ್ಮ ಕುಟುಂಬದ ಸದಸ್ಯರಿಂದ ಹಾಗೂ ಸಾಮಾಜಿಕ ಗುಂಪುಗಳಿಂದ ಹಠಾತ್ತನೆ ಬೇರ್ಪಡುತ್ತಾರೆ. ಇದಕ್ಕೆ ಸಂತ್ರಸ್ತರ ಬಗ್ಗೆ ಅನುಭವಿಸುವ ಪಾಪಪ್ರಜ್ಞೆ ಕಾರಣ" ಎಂದು ನ್ಯಾಯಪೀಠ ಹೇಳಿತು.
"ಅವರನ್ನು ಸಮಾಜದಿಂದ ಮತ್ತೆ ಪ್ರತ್ಯೇಕವಾಗಿಸುವ, ಏಕಾಂಗಿಯಾಗಿಸುವ ಹಾಗೂ ಹಿಂಪಡೆಯುವ ಮತ್ತೊಂದು ದುರದೃಷ್ಟಕರ ಸಂದರ್ಭ ಇದಾಗಿದೆ. ಅಪರಾಧಗಳ ಸ್ವರೂಪ ಕೂಡಾ ಮತ್ತೆ ಶಿಕ್ಷಣವನ್ನು ಮುಂದುವರಿಸಲಾಗದ ಹಾಗೂ ಕಲಿಯಲಾಗದಷ್ಟು ಗಂಭೀರವಾಗಿರುತ್ತದೆ" ಎಂದು ಅಭಿಪ್ರಾಯ ಪಟ್ಟಿದೆ.
ಲೈಂಗಿಕ ದೌರ್ಜನ್ಯಕ್ಕೀಡಾದ ಸಂತ್ರಸ್ತರ ಕುರಿತು 2015ರ ತೀರ್ಪಿನ ಪಾಲನೆಗೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.