ಕಾಸರಗೋಡು: ಹೆಚ್ಚುತ್ತಿರುವ ಮಾದಕ ದ್ರವ್ಯ ವಿರುದ್ಧ ದೇಶವ್ಯಾಪಿಯಾಗಿ ದೊಡ್ಡ ಮಟ್ಟದ ಜಾಗೃತಿ ಅಭಿಯಾನ ನಡೆಸಬೇಕಾದ ಅನಿವಾರ್ಯತೆಯಿದೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದರು.
ಅವರು ಕಾಞಂಗಾಡಿನಲ್ಲಿ ಸುನ್ನಿ ಯುವ ಸಂಘ ಆಯೋಜಿಸಿದ್ದ ಮಾದಕ ದ್ರವ್ಯ(ಡ್ರಗ್ಸ್) ವಿರುದ್ದ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲಕ್ಷಾಂತರ ಮಂದಿಯನ್ನೊಳಗೊಂಡ ಯುವ ಸಮೂಹದ ಭವಿಷ್ಯ ಮಾದಕ ದ್ರವ್ಯ ಬಳಕೆಯಿಂದ ಹಾಳಾಗುತ್ತಿದೆ. ದೇಶಕ್ಕೆ ಮಾರಕವಾಗಿ ಪರಿಣಮಿಸುತ್ತಿರುವ ಡ್ರಗ್ಸ್ ವಿರುದ್ದ ಧರ್ಮ, ರಾಜಕೀಯಾತೀತವಾಗಿ ವಾಗಿ ಸಮರ ಸಾರಬೇಕಾದ ಅಗತ್ಯವಿದೆ ಎಂದು ತಿಳಿಸಿದರು.
ದೆಹಲಿ ಹಾಗೂ ಗುಜರಾತ್‍ನ ವಿವಿಧ ಕೇಂದ್ರಗಳಲ್ಲಿ ಒಂದೆ ದಿನ 4400 ಕೋಟಿ ರೂ. ಮೊತ್ತದ ಭಾರಿ ಪ್ರಮಾಣದ ಡ್ರಗ್ಸ್ ಪತ್ತೆಯಾಗಿದ್ದು, ಇದರಿಂದ ದೇಶ ಯಾವ ರೀತಿ ಮಾದಕದ್ರವ್ಯದ ಜಾಲಕ್ಕೆ ಸಿಲುಕುತ್ತಿದೆ ಎಂಬುದೂ ಸಾಬೀತಾಗುತ್ತಿದೆ. ಇಂತಹ ಪಿಡುಗನ್ನು ತಳಮಟ್ಟದಿಂದ ತೊಡೆದುಹಾಕಲು ಪ್ರತಿಯೊಬ್ಬ ಬದ್ಧರಾಗಬೇಕು. ಈ ನಿಟ್ಟಿನಲ್ಲಿ ಸುನ್ನಿ ಯುವ ಸಂಘ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ. ಬೆಂಗಳೂರಿನಲ್ಲಿಯೂ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕೇರಳ ವಿಧಾನಸಭಾ ಸ್ಪೀಕರ್ ಎ. ಎಂ. ಶಂಶೀರ್, ಶಾಸಕ ಎ.ಕೆ.ಎಂ ಅಶ್ರಫ್, ಸಿ.ಎಚ್ ಕುಞಂಬು, ಶಿವಗಿರಿ ಮಠದ ಸ್ವಾಮಿ ಪ್ರೇಮಾನಂದ, ಮೊಹಮ್ಮದ್ ಅಬ್ದುಲ್ ಹಕೀಮ್, ಬಾದಷಾ ಸಕಾಫಿ, ಮೌಲಾನ ಶಾಫಿ ಸ-ಅದಿ, ಜಿ.ಎ ಬಾವ ಮೊದಲದವರು ಉಪಸ್ಥಿತರಿದ್ದರು.