ನವದೆಹಲಿ: ಸಂಸತ್ ಅಧಿವೇಶನಕ್ಕೆ ಮುನ್ನ 'ಇಂಡಿಯಾ' ಮೈತ್ರಿಕೂಟದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ, '80, 90 ಬಾರಿ ಜನರಿಂದ ತಿರಸ್ಕಾರಕ್ಕೆ ಒಳಗಾದವರು ರಾಜಕೀಯ ಲಾಭಕ್ಕಾಗಿ ಗೂಂಡಾಗಿರಿ ಮೂಲಕ ಸಂಸತ್ತನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಟೀಕಿಸಿದರು.
ಅಧಿವೇಶನಕ್ಕೆ ಮುನ್ನ ಸೋಮವಾರ ಇಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, 'ಅಡ್ಡಿಪಡಿಸುವವರನ್ನು ಸಮಯ ಬಂದಾಗ ಮತದಾರರೇ ಶಿಕ್ಷಿಸುತ್ತಾರೆ. ಹೊಸ ಮುಖಗಳು ಸೇರಿದಂತೆ ಸದಸ್ಯರು ಸಂಸತ್‌ನಲ್ಲಿ ಆರೋಗ್ಯಕರ ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವುದು ಅತ್ಯಗತ್ಯ' ಎಂದು ಕಿವಿಮಾತು ಹೇಳಿದರು.
ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ ಅಭೂತಪೂರ್ವ ಜಯ ಗಳಿಸಿದ ಬಳಿಕ ಮೋದಿ ಅವರು ವಿಪಕ್ಷಗಳ ವಿರುದ್ಧ ಟೀಕಾಪ್ರಹಾರವನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ. ಆದರೆ, ಜಾರ್ಖಂಡ್‌ನಲ್ಲಿ ಎನ್‌ಡಿಎ ಮೈತ್ರಿಕೂಟಕ್ಕೆ ಅಧಿಕಾರದ ಗದ್ದುಗೆ ದಕ್ಕಿಲ್ಲ.
'ದುರದೃಷ್ಟವಶಾತ್, ಜನರಿಂದ ತಿರಸ್ಕರಿಸಲ್ಪಟ್ಟ ಕೆಲವು ವ್ಯಕ್ತಿಗಳು ತಮ್ಮ ರಾಜಕೀಯ ಲಾಭಕ್ಕಾಗಿ ವಿಚ್ಛಿದ್ರಕಾರಕ ತಂತ್ರಗಳ ಮೂಲಕ ಸಂಸತ್ತನ್ನು ನಿಯಂತ್ರಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ. ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುವ ಅವರ ಪ್ರಾಥಮಿಕ ಗುರಿ ಅಪರೂಪಕ್ಕೊಮ್ಮೆ ಯಶಸ್ವಿಯಾಗುತ್ತದೆ. ಜನರು ಅವರ ಕಾರ್ಯಗಳನ್ನು ಗಮನಿಸುತ್ತಿದ್ದಾರೆ. ಸಮಯ ಬಂದಾಗ ಅವರನ್ನು ಶಿಕ್ಷಿಸುತ್ತಾರೆ' ಎಂದು ಮೋದಿ ಹೇಳಿದರು.
'ಅತ್ಯಂತ ನೋವಿನ ಸಂಗತಿಯೆಂದರೆ, ವಿರೋಧ ಪಕ್ಷಗಳ ಇಂತಹ ಕಾರ್ಯಗಳು ಹೊಸ ಆಲೋಚನೆಗಳು ಮತ್ತು ಉತ್ಸಾಹ ಹೊಂದಿರುವ ಎಲ್ಲ ಪಕ್ಷಗಳ ಹೊಸ ಸಂಸದರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಈ ಸಂಸದರಿಗೆ ಸದನದಲ್ಲಿ ಮಾತನಾಡಲು ಅವಕಾಶ ಲಭ್ಯವಾಗುತ್ತಿಲ್ಲ' ಎಂದು ಅವರು ಬೇಸರ ವ್ಯಕ್ತಪಡಿಸಿದರು.
'ವಿಪಕ್ಷಗಳ ಕೆಲವೊಂದು ನಾಯಕರು ಸಂಸತ್ತಿನಲ್ಲಿ ಚರ್ಚೆಗಳಿಗೆ ಅವಕಾಶ ನೀಡುವುದಿಲ್ಲ ಅಥವಾ ಪ್ರಜಾಪ್ರಭುತ್ವದ ತತ್ವಗಳು ಅಥವಾ ಜನರ ಆಶೋತ್ತರಗಳನ್ನು ಗೌರವಿಸುವುದಿಲ್ಲ. ಅವರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳುವುದಿಲ್ಲ. ಪರಿಣಾಮವಾಗಿ, ಅವರು ಸಾರ್ವಜನಿಕರ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ, ಚುನಾವಣೆಗಳಲ್ಲಿ ಪದೇ ಪದೇ ಜನರಿಂದ ತಿರಸ್ಕಾರಕ್ಕೆ ಒಳಗಾಗುತ್ತಿದ್ದಾರೆ' ಎಂದು ಅವರು ಟೀಕಿಸಿದರು.
ಪ್ರಜಾಪ್ರಭುತ್ವದಲ್ಲಿ ಜನರ ಭಾವನೆಗಳನ್ನು ಗೌರವಿಸುವುದು ಮತ್ತು ಅವರ ನಿರೀಕ್ಷೆಗಳನ್ನು ಈಡೇರಿಸಲು ಅವಿರತವಾಗಿ ಶ್ರಮಿಸುವುದು ಅನಿವಾರ್ಯ. ಹೀಗಾಗಿ, ಪ್ರತಿಪಕ್ಷಗಳು ಅತ್ಯಂತ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ಅವರು ಒತ್ತಾಯಿಸಿದರು.