ಜಮುಯಿ: ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಆದಿವಾಸಿಗಳ ಕೊಡುಗೆಯನ್ನು ಗುರುತಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಹಿಂದಿನ ಸರ್ಕಾರಗಳು ವಿಫಲವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಟೀಕಿಸಿದರು.
'ಸ್ವಾತಂತ್ರ್ಯ ಚಳವಳಿಯ ಎಲ್ಲಾ ಶ್ರೇಯಸ್ಸನ್ನು ಕೇವಲ ಒಂದು ಪಕ್ಷ ಮತ್ತು ಒಂದು ಕುಟುಂಬಕ್ಕೆ ನೀಡುವ ಪ್ರಯತ್ನ ನಡೆದಿತ್ತು' ಎಂದು ಅವರು, ಕಾಂಗ್ರೆಸ್ ಅಥವಾ ಯಾವುದೇ ವ್ಯಕ್ತಿಯನ್ನು ಉಲ್ಲೇಖಿಸದೆ ದೂರಿದರು.
ಭಗವಾನ್ ಬಿರ್ಸಾ ಮುಂಡಾ ಅವರ 150 ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಆದಿವಾಸಿ ಗೌರವ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ದೇಶಕ್ಕೆ ಕೇವಲ ಒಂದು ಕುಟುಂಬದಿಂದ ಸ್ವಾತಂತ್ರ್ಯ ಸಿಕ್ಕದ್ದು ಎಂಬುದಾಗಿದ್ದರೆ, ಮುಂಡಾ ಅವರು 'ಉಲ್ ಗುಲಾನ್' ಚಳುವಳಿಯನ್ನು ಏಕೆ ಪ್ರಾರಂಭಿಸಿದ್ದರು ಎಂದು ಮೋದಿ ಪ್ರಶ್ನಿಸಿದರು.
'ಹಿಂದಿನ ಸರ್ಕಾರಗಳ ಅವಧಿಯಲ್ಲಿ ಭಾರತದ ಆದಿವಾಸಿ ಸಮುದಾಯಕ್ಕೆ ಮನ್ನಣೆ ಸಿಕ್ಕಿರಲಿಲ್ಲ. ಅಲ್ಲದೆ ಅವರಿಗೆ ನ್ಯಾಯವೂ ಸಿಗಲಿಲ್ಲ' ಎಂದ ಪ್ರಧಾನಿ, 'ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಆದಿವಾಸಿ ನಾಯಕರು ನಿರ್ಣಾಯಕ ಪಾತ್ರ ವಹಿಸಿದ್ದಾರೆ' ಎಂದರು.
ಆದಿವಾಸಿಗಳು ಪ್ರಕೃತಿಯೊಂದಿಗಿನ ಆಳವಾದ ಸಂಬಂಧ ಹೊಂದಿದ್ದಾರೆ. ಅವರದ್ದು ಪರಿಸರಸ್ನೇಹಿ ಜೀವನಶೈಲಿಯಾಗಿದೆ ಎಂದ ಅವರು, ಆದಿವಾಸಿಗಳ ಜೀವನಮಟ್ಟ ಸುಧಾರಿಸಲು ತಮ್ಮ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಆದಿವಾಸಿಗಳ ಭಾಗವಹಿಸುವಿಕೆಯನ್ನು ಪ್ರಶಂಸಿಸಿದ ಮೋದಿ, ಕ್ರೀಡಾ ಕ್ಷೇತ್ರದಲ್ಲಿ ಅವರ ಪಾತ್ರ ಮಹತ್ವದಾಗಿದ್ದು, ಆದಿವಾಸಿ ಕ್ರೀಡಾಪಟುಗಳನ್ನು ಉತ್ತೇಜಿಸಲು ಸರ್ಕಾರ ಅಗತ್ಯ ಮೂಲಸೌಕರ್ಯವನ್ನು ಒದಗಿಸುವುದಾಗಿ ಭರವಸೆ ನೀಡಿದರು.
ಆದಿವಾಸಿ ನಾಯಕ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಅಂಗವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರು ಶುಕ್ರವಾರ ದೆಹಲಿಯ ರಿಂಗ್ ರೋಡ್‌ನಲ್ಲಿರುವ ಬಾನ್ಸೆರಾ ಪಾರ್ಕ್‌ನ ಪ್ರವೇಶದ್ವಾರದಲ್ಲಿ ಮುಂಡಾ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು ಪಿಟಿಐ ಚಿತ್ರ -------
ಬಿಹಾರದ ಜಮುಯಿಯಲ್ಲಿ ಭಗವಾನ್ ಬಿರ್ಸಾ ಮುಂಡಾ ಅವರ 150 ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಆದಿವಾಸಿ ಗೌರವ ದಿನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆದಿವಾಸಿ ಸಮುದಾಯದ ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆಗೆ ಗೌರವ ಸಲ್ಲಿಸಿದರು ಪಿಟಿಐ ಚಿತ್ರ.