ನವದೆಹಲಿ: 'ಪ್ರತಿಯೊಬ್ಬರ ಕೌಶಲಕ್ಕೂ ಪ್ರತಿಫಲ ಸಿಗುವಂತಹ ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಕೊಡುಗೆಯನ್ನು ಗೌರವಿಸುವಂತಹ ವ್ಯವಸ್ಥೆಯೊಂದನ್ನು ರೂಪಿಸುವ ಅಗತ್ಯ ಇದೆ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.
'ವಿಶೇಷ ಕೌಶಲ ಇರುವ ಜನರೊಂದಿಗೆ ಸ್ಮರಣೀಯ ದೀಪಾವಳಿ ಆಚರಿಸಿದ್ದೇನೆ. ಬಣ್ಣ ಹಚ್ಚುವ ಕೆಲಸ ಮಾಡುವ ಸಹೋದರರ ಜೊತೆ ಹಾಗೂ ಕುಂಬಾರಿಕೆ ಕುಟುಂಬದ ಸದಸ್ಯರೊಂದಿಗೆ ಮಣ್ಣಿನ ಹಣತೆ ತಯಾರಿಸುವ ಮೂಲಕ ನಾನು ದೀಪಾವಳಿ ಆಚರಿಸಿದೆ' ಎಂದು ಅವರು ವಿವರಿಸಿದ್ದಾರೆ.
'ಈ ಜನರು ಮಾಡುವ ಕೆಲಸವನ್ನು ಬಹಳ ಹತ್ತಿರದಿಂದ ನೋಡಿದೆ. ಅವರ ಕೌಶಲ ಹಾಗೂ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡಿದೆ' ಎಂದಿದ್ದಾರೆ.
'ನಾವು ಹಬ್ಬಗಳನ್ನು ಬಹಳ ಸಂಭ್ರಮದಿಂದ ಆಚರಿಸುತ್ತೇವೆ. ಆದರೆ, ಈ ಜನರ ಮನೆಗೆ ಹೋಗುವುದಿಲ್ಲ. ಸ್ವಲ್ಪ ಹಣ ಗಳಿಸುವುದಕ್ಕಾಗಿ ಈ ಜನರು ತಮ್ಮ ಹಳ್ಳಿ, ಪಟ್ಟಣ ಹಾಗೂ ಕುಟುಂಬಗಳನ್ನು ಮರೆತು ದುಡಿಯುತ್ತಾರೆ' ಎಂದು ಸಂವಾದದಲ್ಲಿ ಹೇಳಿದ್ದಾರೆ.
'ಅವರು ಹಣತೆಗಳನ್ನು ತಯಾರಿಸಲು ಬಳಸುವ ಮಣ್ಣಿನೊಂದಿಗೆ ಕೆಲಸ ಮಾಡುವ ಮೂಲಕ ಸಂತೋಷ ಕಾಣುತ್ತಾರೆ. ಬೇರೆಯವರ ಹಬ್ಬಗಳಲ್ಲಿ ಬೆಳಕು ಹೊಮ್ಮುವಂತೆ ಮಾಡುವ ಅವರು, ತಮ್ಮ ಬದುಕನ್ನು ಬೆಳಗುವಂತೆ ಮಾಡಿಕೊಳ್ಳಲು ಸಮರ್ಥರಾಗಿದ್ದಾರೆಯೇ? ಇತರರ ಮನೆಗಳನ್ನು ನಿರ್ಮಾಣ ಮಾಡುವವರ ಪೈಕಿ ಅನೇಕರು ತಮ್ಮ ಮನೆಗಳ ನಿರ್ವಹಣೆಗೆ ಹೆಣಗಾಡುತ್ತಾರೆ' ಎಂದು ಹೇಳಿದ್ದಾರೆ.
10 ಜನಪಥ'ದಲ್ಲಿರುವ ತಮ್ಮ ನಿವಾಸದಲ್ಲಿ ಕಾರ್ಮಿಕರೊಂದಿಗೆ ರಾಹುಲ್ ಗಾಂಧಿ ಅವರು ಗೋಡೆಗಳಿಗೆ ಬಣ್ಣ ಬಳಿಯುವುದನ್ನು ಕಲಿಯುತ್ತಿರುವ ದೃಶ್ಯಗಳು ವಿಡಿಯೊದಲ್ಲಿವೆ. ಇವರಿಗೆ ಸೋದರಳಿಯ ರೇಹಾನ್ ಸಾಥ್ ನೀಡಿದ್ದಾರೆ. ವಿಡಿಯೊದ ಮತ್ತೊಂದು ಭಾಗದಲ್ಲಿ ರಾಹುಲ್ ಗಾಂಧಿ ಅವರು ಕುಂಬಾರಿಕೆಯಲ್ಲಿ ನಿರತರಾಗಿರುವ ಮಹಿಳೆಯೊಬ್ಬರ ಮನೆಗೆ ತೆರಳಿ ಮಣ್ಣಿನ ಹಣತೆ ತಯಾರಿಸುತ್ತಿರುವ ದೃಶ್ಯಗಳಿವೆ. ಹಣತೆ ತಯಾರಿಕೆಯಲ್ಲಿ ಮಹಿಳೆಯ ಐವರು ಪುತ್ರಿಯರು ನೆರವಾಗಿದ್ದಾರೆ. ತಾವು ತಯಾರಿಸಿದ ಹಣತೆಗಳನ್ನು ತನ್ನ ತಾಯಿ ಹಾಗೂ ತಂಗಿಗೆ ನೀಡುವುದಾಗಿಯೂ ರಾಹುಲ್ ಹೇಳಿದ್ದಾರೆ.