ನವದೆಹಲಿ: ರಸ್ತೆ ವಿಸ್ತರಣೆ ಮತ್ತು ಒತ್ತುವರಿ ತೆರವು ಸಂದರ್ಭದಲ್ಲಿ ಸಂಬಂಧಪಟ್ಟವರಿಗೆ ಮುಂಚಿತವಾಗಿ ನೋಟಿಸ್ ನೀಡದೇ, ಕಟ್ಟಡಗಳನ್ನು 'ರಾತ್ರೋರಾತ್ರಿ ನೆಲಸಮಗೊಳಿಸುವಂತಿಲ್ಲ' ಎಂದು ಹೇಳಿರುವ ಸುಪ್ರೀಂ ಕೋರ್ಟ್, ಈ ವಿಚಾರವಾಗಿ ಅನುಸರಿಸಬೇಕಾದ ಪ್ರಕ್ರಿಯೆ ಕುರಿತು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಬುಧವಾರ ನಿರ್ದೇಶನ ನೀಡಿದೆ.
2019ರಲ್ಲಿ ಕಟ್ಟಡವೊಂದನ್ನು 'ಅಕ್ರಮ'ವಾಗಿ ನೆಲಸಮಗೊಳಿಸಿದ್ದಕ್ಕಾಗಿ ಉತ್ತರ ಪ್ರದೇಶ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ವೇಳೆ ಸುಪ್ರೀಂ ಕೋರ್ಟ್ ಈ ನಿರ್ದೇಶನ ನೀಡಿದೆ.
ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ತ್ರಿಸದಸ್ಯ ನ್ಯಾಯಪೀಠ, ರಸ್ತೆ ವಿಸ್ತರಣೆಗಾಗಿ 2019ರಲ್ಲಿ ನೆಲಸಮಗೊಳಿಸಿದ ಮನೆಯ ಮಾಲೀಕನಿಗೆ ₹25 ಲಕ್ಷ ಪರಿಹಾರ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶಿಸಿತು.
ನ್ಯಾಯಮೂರ್ತಿಗಳಾದ ಜೆ.ಬಿ.ಪಾರ್ದೀವಾಲಾ ಹಾಗೂ ಮನೋಜ್ ಮಿಶ್ರಾ ಈ ಪೀಠದಲ್ಲಿದ್ದರು.
ರಸ್ತೆ ವಿಸ್ತರಣೆ ಕುರಿತ ನಿರ್ದೇಶನಗಳನ್ನು ಒಳಗೊಂಡ ತನ್ನ ಆದೇಶದ ಪ್ರತಿಗಳನ್ನು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸುವಂತೆ ರಿಜಿಸ್ಟ್ರಾರ್(ನ್ಯಾಯಿಕ) ಅವರಿಗೆ ನ್ಯಾಯಪೀಠ ಸೂಚಿಸಿತು.
ಮಹಾರಾಜಗಂಜ್ ಜಿಲ್ಲೆಯಲ್ಲಿ ರಸ್ತೆ ವಿಸ್ತರಣೆಗಾಗಿ ಮನೆಯೊಂದನ್ನು ನೆಲಸಮಗೊಳಿಸಲಾಗಿತ್ತು. ಇದನ್ನು ಪ್ರಶ್ನಿಸಿ ಮನೆಯ ಮಾಲೀಕ, ವಕೀಲರಾದ ಸಿದ್ಧಾರ್ಥ ಭಟ್ನಾಗರ್ ಹಾಗೂ ಶುಭಂ ಕುಲಶ್ರೇಷ್ಠ ಮೂಲಕ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
'ನೀವು ರಾತ್ರೋರಾತ್ರಿ ಬುಲ್ಡೋಜರ್‌ನೊಂದಿಗೆ ಸ್ಥಳಕ್ಕೆ ತೆರಳಿ ಕಟ್ಟಡಗಳನ್ನು ಧ್ವಂಸ ಮಾಡುವಂತಿಲ್ಲ. ಮನೆ ತೆರವು ಮಾಡುವುದಕ್ಕೆ ನೀವು ಕುಟುಂಬಕ್ಕೆ ಕಾಲಾವಕಾಶ ಕೊಡುವುದಿಲ್ಲ ಅಂದರೆ ಹೇಗೆ? ಅಲ್ಲಿರುವ ಗೃಹೋಪಯೋಗಿ ವಸ್ತುಗಳ ಗತಿಯೇನು' ಎಂದು ಉತ್ತರ ಪ್ರದೇಶ ಪರ ವಕೀಲರನ್ನು ಪೀಠ ಪ್ರಶ್ನಿಸಿದೆ.
ನೆಲಸಮಗೊಳಿಸಲಾದ ಮನೆಗೆ ಸಂಬಂಧಿಸಿ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ.
'ಈ ಪ್ರಕರಣದಲ್ಲಿ, ಕಟ್ಟಡ ನೆಲಸಮಗೊಳಿಸುವಾಗ ಕಾನೂನು ಪಾಲನೆಯಾಗಿಲ್ಲ. 3.7 ಚದರ ಮೀಟರ್‌ನಷ್ಟು ಒತ್ತುವರಿಯನ್ನು ಮಾತ್ರ ತೆರವುಗೊಳಿಸಬೇಕಿತ್ತು ಎಂದು ದಾಖಲೆಗಳು ಹೇಳುತ್ತವೆ. ಆದರೆ, ಮನೆಗಳನ್ನು ಹೇಗೆ ಧ್ವಂಸ ಮಾಡಿದಿರಿ' ಎಂದು ಪ್ರಶ್ನಿಸಿದ ಪೀಠ, 'ಭಾರಿ ಒತ್ತಡಕ್ಕೆ ಮಣಿದು ನಡೆದ ಕಾರ್ಯಾಚರಣೆ ನಡೆಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ' ಎಂದಿದೆ.
'ಸುಪ್ರೀಂ' ನಿರ್ದೇಶನ
ರಸ್ತೆ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳುವ ಮುನ್ನ ದಾಖಲೆಗಳು/ನಕಾಶೆಯಲ್ಲಿ ನಮೂದಾಗಿರುವ ರಸ್ತೆಯ ಸದ್ಯದ ಅಗಲ ಗುರುತಿಸಿ ಸಮೀಕ್ಷೆ ನಡೆಸಬೇಕು. ಇದರಿಂದ ರಸ್ತೆ ಒತ್ತುವರಿ ಆಗಿದೆಯೇ ಎಂಬುದು ಗೊತ್ತಾಗಲಿದೆ
ಒತ್ತುವರಿ ಆಗಿರುವುದು ಕಂಡುಬಂದಲ್ಲಿ ಒತ್ತುವರಿ ತೆರವುಗೊಳಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಿ ನೋಟಿಸ್ ನೀಡಬೇಕು. ಒಂದು ವೇಳೆ ಈ ನೋಟಿಸ್‌ಗೆ ಆಕ್ಷೇಪ ವ್ಯಕ್ತವಾದಲ್ಲಿ ತೆರವು ಕಾರ್ಯ ಕುರಿತು ಸಕಾರಣಗಳಿರುವ ಆದೇಶ ಜಾರಿ ಮಾಡಿ ಕ್ರಮ ತೆಗೆದುಕೊಳ್ಳಬೇಕು
ಯಾವುದೇ ವ್ಯಕ್ತಿ ಆದೇಶದ ಅನುಸಾರ ಒತ್ತುವರಿ ತೆರವು ಮಾಡದಿದ್ದಲ್ಲಿ ಹಾಗೂ ತೆರವಿಗೆ ಸಕ್ಷಮ ಪ್ರಾಧಿಕಾರದಿಂದ ತಡೆಯಾಜ್ಞೆ ಇಲ್ಲದಿದ್ದಾಗ ಅಂತಹ ಸಂದರ್ಭದಲ್ಲಿ ಸಂಬಂಧಪಟ್ಟ ಪ್ರಾಧಿಕಾರ ಅತಿಕ್ರಮಣವನ್ನು ತೆರವುಗೊಳಿಸಬಹುದು
ಸದ್ಯದ ರಸ್ತೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಸರ್ಕಾರಿ ಜಾಗದ ಬಳಕೆ ನಂತರವೂ ಅಗತ್ಯದಷ್ಟು ವಿಸ್ತರಣೆ ಸಾಧ್ಯವಾಗದಿದ್ದಾಗ ಕಾನೂನು ಪ್ರಕಾರ ಜಮೀನಿನ ಸ್ವಾಧೀನಕ್ಕೆ ಕ್ರಮ ಕೈಗೊಳ್ಳಬೇಕು.