ಬರ್ಮೊ : ದೇಶದ ಆತ್ಮವಾಗಿರುವ ಸಂವಿಧಾನವನ್ನು ನಾಶಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಜಾರ್ಖಂಡ್‌ನ ಬೊಕಾರೊ ಜಿಲ್ಲೆಯ ಬರ್ಮೊದಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 'ಪ್ರಧಾನಿ ಮೋದಿ ಅವರು ಬಡವರ ಕಲ್ಯಾಣಕ್ಕಾಗಿ ಅಲ್ಲ, ಕೋಟ್ಯಧಿಪತಿಗಳ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಾರೆ.
ರಾಹುಲ್ ಗಾಂಧಿ ಚುನಾವಣಾ ಸಮಾವೇಶಗಳಲ್ಲಿ ಪ್ರದರ್ಶಿಸುವ ಕೆಂಪು ಬಣ್ಣದ ಪುಸಕ್ತದ ಕುರಿತು ಬಿಜೆಪಿ ಆಕ್ಷೇಪವನ್ನು ಎತ್ತಿತ್ತು. ಕೆಂಪು ಬಣ್ಣ ಪುಸ್ತಕದ ಒಳಭಾಗ ಖಾಲಿಯಾಗಿದೆ ಎಂದು ಇತ್ತೀಚೆಗೆ ಬಿಜೆಪಿ ಆರೋಪಿಸಿತ್ತು.
'ಸಂವಿಧಾನವನ್ನು ನಾಶಗೊಳಿಸಲು ಪ್ರಧಾನಿ ಮೋದಿ ಅವರು ಬಯಸುತ್ತಾರೆ. ಆದರೆ, ಯಾವುದೇ ಶಕ್ತಿ ಸಂವಿಧಾನವನ್ನು ನಾಶಗೊಳಿಸಲು ಸಾಧ್ಯವಿಲ್ಲ. ಅಲ್ಲದೆ, ದೇಶದ ಸಂಪತ್ತನ್ನು ಕೇವಲ 25 ಬಂಡವಾಳಶಾಹಿಗಳ ಕೈಗೆ ನೀಡಿದ್ದಾರೆ. ಕೈಗಾರಿಕೋದ್ಯಮಿಗಳ ಸುಮಾರು ₹16 ಲಕ್ಷ ಕೋಟಿ ಸಾಲವನ್ನು ಮೋದಿ ಮನ್ನಾ ಮಾಡಿದ್ದಾರೆ. ಆದರೆ, ಬಡವರು, ರೈತರು ಮತ್ತು ದಲಿತರಿಗಾಗಿ ಏನನ್ನೂ ಮಾಡಿಲ್ಲ' ಎಂದು ವಾಗ್ದಾಳಿ ನಡೆಸಿದ್ದಾರೆ.
ಜಿಎಸ್‌ಟಿ ಮತ್ತು ನೋಟು ಅಮಾನ್ಯೀಕರಣದ ಮೂಲಕ ದೇಶದ ಯುವಜನತೆಯನ್ನು ಪ್ರಧಾನಿ ಮೋದಿ ನಿರುದ್ಯೋಗಿಗಳನ್ನಾಗಿ ಮಾಡಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ.