ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ವಿಸ್ತರಣೆಯ ನಿಯಾಮವಳಿಯ ಪರಿಷ್ಕರಣೆ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿರುವ ಭಾರತ, ಅನಗತ್ಯ ವಿಳಂಬದಿಂದ ಶಾಶ್ವತ ಸದಸ್ಯತ್ವ ವಿಸ್ತರಣೆಯು ತಕ್ಷಣಕ್ಕೆ ಸಾಧ್ಯವಾಗುವುದಿಲ್ಲ ಎಂದು ಪ್ರತಿಪಾದಿಸಿದೆ.
'ಭದ್ರತಾ ಮಂಡಳಿಯಲ್ಲಿ ಸದಸ್ಯತ್ವ ಹೆಚ್ಚಳ ಹಾಗೂ ಸಮಾನ ಪ್ರಾತಿನಿಧ್ಯ' ಕುರಿತಾಗಿ ಮಂಗಳವಾರ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನದಲ್ಲಿ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ಪಿ.ಹರೀಶ್ ಈ ಬೇಡಿಕೆ ಮುಂದಿಟ್ಟರು.
'ಭದ್ರತಾ ಮಂಡಳಿಯಲ್ಲಿ ಸದಸ್ಯತ್ವ ವಿಸ್ತರಣೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದ್ದು, 1965ರಿಂದಲೂ ಈ ವಿಚಾರದಲ್ಲಿ ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ. ಶಾಶ್ವತ ಸದಸ್ಯತ್ವಕ್ಕೆ ಹೊರತಾದ ವಿಭಾಗಗಳಲ್ಲಿ ಮಾತ್ರ ವಿಸ್ತರಣೆಯಾಗಿದೆ' ಎಂದರು.
'1965ರಲ್ಲಿ ಈ ವಿಭಾಗದಲ್ಲಿ ಸದಸ್ಯರ ಪ್ರಮಾಣವು ಆರು ಇತ್ತು. ಈಗ ಹತ್ತಕ್ಕೆ ಏರಿಕೆಯಾಗಿದೆಯಷ್ಟೆ' ಎಂದು ಇದೇ ವೇಳೆ ಉಲ್ಲೇಖಿಸಿದರು.
ಶಾಶ್ವತ ಸದಸ್ಯತ್ವದ ವಿಚಾರದಲ್ಲಿ 'ಅಂತರ ಸರ್ಕಾರಿ ಮಾತುಕತೆ' (ಐಜಿಎನ್) ಪ್ರಕ್ರಿಯೆಯನ್ನು ಪ್ರಸ್ತಾಪಿಸಿದ ಅವರು, 'ಆರಂಭಗೊಂಡ 16 ವರ್ಷಗಳಿಂದಲೂ ಕೇವಲ ಹೇಳಿಕೆ ನೀಡುವುದಕ್ಕಷ್ಟೆ ಈ ಪ್ರಕ್ರಿಯೆ ಸೀಮಿತಗೊಂಡಿದೆ. ಕಾಲಮಿತಿಯ ಒಳಗೆ ಯಾವುದೇ ಗುರಿ ನಿಗದಪಡಿಸದೇ, ಇನ್ನೊಬ್ಬರ ಮೇಲೆ ಹೊಣೆಗಾರಿಕೆ ವರ್ಗಾಯಿಸುವುದರಲ್ಲಿ ಕಾಲಹರಣ ಮಾಡಲಾಗುತ್ತಿದೆ' ಎಂದು ಹರೀಶ್ ಪ್ರತಿಪಾದಿಸಿದರು.
'ಭದ್ರತಾ ಮಂಡಳಿಯ ಸುಧಾರಣೆಗೆ ಹೊಸ ಮಾದರಿಯ ಅಗತ್ಯವಿದ್ದು, ಪರಿಣಾಮಕಾರಿ ಬೆಳವಣಿಗೆಯನ್ನು ಭಾರತ ಎದುರು ನೋಡುತ್ತಿದೆ. ನಿಯಾಮವಳಿಯಲ್ಲಿ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ, ಶಾಶ್ವತ ಸದಸ್ಯತ್ವ ಪಡೆಯಲು ಕಾಯುತ್ತಿರುವ ಏಷ್ಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕ ಹಾಗೂ ಕೆರಿಬಿಯನ್ ರಾಷ್ಟ್ರಗಳ ಬೇಡಿಕೆ ಈಡೇರಿಕೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ' ಎಂದು ಈ ವೇಳೆ ಎಚ್ಚರಿಸಿದರು.