ಕಾಸರಗೋಡು: ತಿರುವನಂತಪುರಕ್ಕೆ ಸಂಚರಿಸುತ್ತಿದ್ದ ವಂದೇಭಾರತ್ ರೈಲಿಗೆ ಬೇಕಲದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ ಪರಿಣಾಮ ರೈಲಿನ ಬೋಗಿಯ ಗಾಜಿಗೆ ಹಾನಿಯುಂಟಾಗಿದೆ. ಗುರುವಾರ ಕಾಸರಗೋಡಿನಿಂದ ತಿರುವನಂತಪುರಕ್ಕೆ ರೈಲು ಹೊರಟಿದ್ದು, ಬೇಕಲ ಮತ್ತು ಕಾಞಂಗಾಡಿನ ಮಧ್ಯೆ ರೈಲಿಗೆ ಕಲ್ಲು ತೂರಲಾಗಿದೆ. ರೈಲ್ವೆ ಟಿಟಿಇ ಕಂಟ್ರೋಲ್‍ರೂಮ್‍ನಿಂದ ಲಭಿಸಿದ ಮಾಹಿತಿಯನ್ವಯ ಕಾಸರಗೋಡು ರೈಲ್ವೆ ಠಾಣೆ ಎಸ್.ಐ ರೆಜಿಕುಮಾರ್ ಹಾಗೂ ರೈಲ್ವೆ ಭದ್ರತಾ ಪಡೆ ಅಧಿಖಾರಿಗಳು ಸ್ಥಳಕ್ಕಾಗಮಿಸಿ ಸ್ಥಳದಲ್ಲಿರುವ ಸಿಸಿ ಕ್ಯಾಮರಾ ದೃಶ್ಯಾವಳಿ ತಪಸಣೆ ನಡೆಸಿದರು.
ಕಲ್ಲು ತೂರಾಟ ಸಾಮಾನ್ಯ:
ಜಿಲ್ಲೆಯಲ್ಲಿ ಮಂಜೇಶ್ವರದಿಂದ ಕಣ್ಣೂರು ವರೆಗೆ ರೈಲುಗಳಿಗೆ ಕಲ್ಲು ತೂರಾಟ, ರೈಲ್ವೆ ಹಳಿಯಲ್ಲಿ ನಾಣ್ಯ, ಕಬ್ಬಿಣ ಸಲಾಕೆ ಸೇರಿದಂತೆ ಇತರ ಸಾಮಗ್ರಿ ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸುತ್ತಿರುವುದು ಸಮಾನ್ಯವಾಗಿದ್ದು, ಆರೋಪಿಗಳ ಪತ್ತೆಕಾರ್ಯ ಸಾಧ್ಯವಾಗದ ಹಿನ್ನೆಲೆಯಲ್ಲಿ ಕೃತ್ಯ ಮರುಕಳಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.