ಅಬುಜಾ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ನೈಜೀರಿಯಾದ ಅಬುಜಾಗೆ ಭೇಟಿ ನೀಡಿದರು. ಇದರೊಂದಿಗೆ 17 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಈ ದೇಶಕ್ಕೆ ಭೇಟಿ ನೀಡಿದಂತಾಗಿದೆ.
ಇದೇ ಸಂದರ್ಭದಲ್ಲಿ ಅವರು ನೈಜೀರಿಯಾ ಅಧ್ಯಕ್ಷ ಬೋಲಾ ಅಹಮ್ಮದ್ ಟಿನುಬು ಅವರೊಂದಿಗೆ ರಕ್ಷಣೆ, ವ್ಯಾಪಾರ ಮತ್ತು ಇಂಧನ ವಲಯಗಳಲ್ಲಿನ ದ್ವಿಪಕ್ಷೀಯ ಸಹಕಾರ ಕುರಿತು ಚರ್ಚಿಸಿದರು.
ಈ ವೇಳೆ, 'ಭಾರತವು ತನ್ನ ಕಾರ್ಯತಂತ್ರದ ಪಾಲುದಾರಿಕೆಯಲ್ಲಿ ನೈಜೀರಿಯಾಗೆ ಹೆಚ್ಚಿನ ಆದ್ಯತೆ ನೀಡುತ್ತದೆ. ನಮ್ಮ ಮಾತುಕತೆ ನಂತರ ಉಭಯ ದೇಶಗಳ ಪಾಲುದಾರಿಕೆಯ ಹೊಸ ಅಧ್ಯಾಯ ಆರಂಭವಾಗಲಿದೆ ಎಂಬ ವಿಶ್ವಾಸವಿದೆ' ಎಂದು ಪ್ರಧಾನಿ ಮೋದಿ ಹೇಳಿದರು.
ಕಳೆದ ತಿಂಗಳು ಸಂಭವಿಸಿದ ಪ್ರವಾಹದಿಂದ ಕಂಗೆಟ್ಟ ನೈಜೀರಿಯಾ ಜನರಿಗೆ ಭಾರತವು 20 ಟನ್ ಪರಿಹಾರ ಸಾಮಗ್ರಿಗಳನ್ನು ರವಾನಿಸಲಿದೆ ಎಂದು ಘೋಷಿಸಿದರು.
'ಪ್ರಧಾನಿ ಮೋದಿ ಭಾರತದಲ್ಲಿನ ಕೃಷಿ, ಸಾರಿಗೆ, ಅಗ್ಗದ ಔಷಧ ಮತ್ತು ಡಿಜಿಟಲ್ ಮಾರ್ಪಾಡುಗಳ ಕುರಿತು ವಿವರಿಸಿದರು' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಉಭಯ ದೇಶಗಳ ನಾಯಕರು ಭಯೋತ್ಪಾದನೆ, ಪೈರಸಿ ಮತ್ತು ತೀವ್ರಗಾಮಿ ಧೋರಣೆ ವಿರುದ್ಧದ ಜಂಟಿ ಹೋರಾಟದ ಕುರಿತ ಬದ್ಧತೆಯನ್ನು ಪ್ರತಿಪಾದಿಸಿದರು.
ನಂತರ ಸಾಂಸ್ಕೃತಿಕ ವಿನಿಮಯ, ಸುಂಕದಲ್ಲಿನ ಸಹಕಾರ ಮತ್ತು ಸಮೀಕ್ಷೆ ಸಹಕಾರ ಕುರಿತ ಮೂರು ಒಪ್ಪಂದಗಳಿಗೆ ಅವರು ಸಹಿ ಮಾಡಿದರು.
ಪ್ರಧಾನಿ ಮೋದಿಗೆ ನೈಜೀರಿಯಾ ದೇಶದ ಗೌರವ
ನೈಜೀರಿಯಾದ ಎರಡನೇ ಅತ್ಯುನ್ನತ ರಾಷ್ಟ್ರೀಯ ಗೌರವ 'ದಿ ಗ್ರಾಂಡ್ ಕಮಾಂಡರ್ ಆಫ್ ದ ಆರ್ಡರ್ ಆಫ್ ದಿ ನೈಜಿರ್' ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಯಿತು. ಈ ಗೌರವನ್ನು ಪಡೆದ ಎರಡನೇ ವಿದೇಶಿ ವ್ಯಕ್ತಿ ಮೋದಿ ಅವರಾಗಿದ್ದಾರೆ.