ಎರ್ನಾಕುಳಂ: ಕೊಚ್ಚಿನ್ ದೇವಸ್ವಂ ಮಂಡಳಿಯ ಅಧೀನದಲ್ಲಿರುವ ದೇವಾಲಯಗಳು ಮತ್ತು ದೇವಾಲಯಗಳ ಆವರಣಗಳನ್ನು ಅನ್ಯ ಧರ್ಮದವರಿಗೆ ಪ್ರವೇಶ ನಿಷೇಧಿಸಬೇಕೆಂದು ಆಗ್ರಹಿಸಿ ತ್ರಿಪುಣಿತುರಾ ಪೂರ್ಣತ್ರಯೀಶ ದೇವಸ್ಥಾನದ ಭಕ್ತರು ಕೇರಳ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದಾರೆ.
‘ಪೂಜೆ, ಆಚರಣೆ, ವಿಧಿಗಳು, ಆಗಮ ಸಂಭ್ರಮಗಳ ಪಾವಿತ್ರ್ಯತೆಯನ್ನು ಪರಿಗಣಿಸದೆ ಅವಿಶ್ವಾಸಿಗಳು ಶ್ರೀ ಪೂರ್ಣತ್ರೀಶ ದೇಗುಲ ಪ್ರವೇಶಿಸುತ್ತಿದ್ದಾರೆ. ಮದ್ಯದ ಅಮಲಿನಲ್ಲಿ ದೇಗುಲದೊಳಗೆ ಪ್ರವೇಶ, ಪಾದರಕ್ಷೆ ಧರಿಸುವುದನ್ನು ನಿರ್ಬಂಧಿಸಬೇಕು ಮತ್ತು ದೇಗುಲದೊಳಗೆ ವಿಡಿಯೋ, ವಾಣಿಜ್ಯ ಚಿತ್ರಗಳ ಚಿತ್ರೀಕರಣವನ್ನು ನಿಷೇಧಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ.
ಅರ್ಜಿಯ ಪ್ರಕಾರ, ದೇವಾಲಯದಲ್ಲಿ ವಾಣಿಜ್ಯ ಚಲನಚಿತ್ರಗಳ ಚಿತ್ರೀಕರಣಕ್ಕೆ ಅವಕಾಶ ನೀಡುವುದು ಕೇರಳ ಹಿಂದೂ ಸಾರ್ವಜನಿಕ ಪೂಜಾ ಸ್ಥಳ ಪ್ರವೇಶ ಅನುಮತಿ ನಿಯಮಗಳು, 1965 ಗೆ ವಿರುದ್ಧವಾಗಿದೆ.
ಮಲಯಾಳಂ ಚಲನಚಿತ್ರ "ವಿಶೇಷಂ" ಅನ್ನು ದೇವಸ್ಥಾನದಲ್ಲಿ ಚಿತ್ರೀಕರಿಸಲಾಗಿದೆ ಎಂದು ಅರ್ಜಿದಾರರು ನಿರ್ದಿಷ್ಟವಾಗಿ ಸೂಚಿಸಿದರು. ಚಿತ್ರತಂಡದ ಬಹುತೇಕರು ಹಿಂದೂಗಳಲ್ಲದವರಾಗಿದ್ದು, ಧಾರ್ಮಿಕ ಆಚಾರ-ವಿಚಾರಗಳನ್ನು ಕಡೆಗಣಿಸಿ ಚಿತ್ರೀಕರಿಸಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ದೇವಸ್ಥಾನದಲ್ಲಿ ವಿವಾಹವಾಗುವ ಜೋಡಿಗಳ ವಧು ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದನ್ನು ತೋರಿಸಿ ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದೂ ಆರೋಪಿಸಲಾಗಿದೆ.
ಕೊಚ್ಚಿನ್ ದೇವಸ್ವಂ ಬೋರ್ಡ್ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ದೇವಾಲಯಗಳ ಪ್ರವೇಶದ್ವಾರದಲ್ಲಿ ಸೂಕ್ತ ಬೋರ್ಡ್‍ಗಳನ್ನು ಅಳವಡಿಸಲು ಪ್ರತಿವಾದಿಗೆ ನಿರ್ದೇಶನವನ್ನು ಅರ್ಜಿಯಲ್ಲಿ ಕೋರಲಾಗಿದೆ. ದೇವಸ್ಥಾನ ಪ್ರವೇಶಿಸುವ ಪ್ರತಿಯೊಬ್ಬ ಭಕ್ತರು ಆಚಾರ-ವಿಚಾರಗಳನ್ನು ಪಾಲಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ.ಅಜಿತ್‍ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಕೊಚ್ಚಿನ್ ದೇವಸ್ವಂ ಮಂಡಳಿಗೆ ಪ್ರತಿ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ನೀಡಿ ನಂತರ ಪ್ರಕರಣವನ್ನು ನವೆಂಬರ್ 13ಕ್ಕೆ ಮುಂದೂಡಿತು.