ಚೆನ್ನೈ: ಕ್ಯಾನ್ಸರ್ ರೋಗಿಯ ಪುತ್ರನೊಬ್ಬ ತನ್ನ ತಾಯಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ಮನಸೋಇಚ್ಚೆ ಚಾಕುವಿನಿಂದ ಏಳು ಬಾರಿ ಇರಿದಿರುವ ಕೃತ್ಯ ಬುಧವಾರ ನಡೆದಿದೆ.
ಇಲ್ಲಿನ ಕಲೈಗನರ್ ಶತಮಾನೋತ್ಸವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೃತ್ಯ ನಡೆದಿದೆ. ಗಂಭೀರವಾಗಿ ಗಾಯಗಳಾಗಿರುವ ವೈದ್ಯ ಬಾಲಾಜಿ ಅವರನ್ನು ನಿಗಾ ಘಟಕದಲ್ಲಿ (ಐಸಿಯು) ಇರಿಸಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
'ನನ್ನ ತಾಯಿಗೆ ಚಿಕಿತ್ಸೆ ನೀಡುವಲ್ಲಿ ವೈದ್ಯರು ನಿರ್ಲಕ್ಷ್ಯ ತೋರಿದರು' ಎಂದು ಸದ್ಯ ಪೊಲೀಸರ ವಶದಲ್ಲಿರುವ ಆರೋಪಿ, 26 ವರ್ಷದ ವಿಘ್ನೇಶ್ವರನ್ ಆರೋಪಿಸಿದ್ದಾನೆ.
ಕೋಲ್ಕತ್ತದ ಸರ್ಕಾರಿ ಆಸ್ಪತ್ರೆಯಲ್ಲಿ ಕಿರಿಯ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಜನದಟ್ಟಣೆ ಇರುವಾಗಲೇ ಚೆನ್ನೈನಲ್ಲಿ ವೈದ್ಯರಿಗೆ ಇರಿಯಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಇರುವ ಭದ್ರತಾ ವ್ಯವಸ್ಥೆಯನ್ನು ಪ್ರಶ್ನಿಸುವಂತಾಗಿದೆ.
ಚಾಕುವಿನ ಇರಿತಕ್ಕೀಡಾಗಿರುವ ಬಾಲಾಜಿ ಆಸ್ಪತ್ರೆಯ ಆಂಕಾಲಜಿ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಆಗಿದ್ದಾರೆ. 'ವೈದ್ಯರು ಹೃದ್ರೋಗಿ ಆಗಿದ್ದು, ಪೇಸ್‌ಮೇಕರ್ ಅಳವಡಿಸಿಕೊಂಡಿದ್ದರು. ಸದ್ಯ ಅವರ ಸ್ಥಿತಿ ಸ್ಥಿರವಾಗಿದೆ' ಎಂದು ಆಸ್ಪತ್ರೆಯ ನಿರ್ದೇಶಕ ಎಲ್.ಪಾರ್ಥಸಾರಥಿ ತಿಳಿಸಿದ್ದಾರೆ.
ವಿಘ್ನೇಷ್ ಮತ್ತು ಆತನ ಗೆಳೆಯರು ಹೊರರೋಗಿಗಳ ಟೋಕನ್ ಪಡೆದು ಬೆಳಿಗ್ಗೆ 10.30ಕ್ಕೆ ಆಸ್ಪತ್ರೆಗೆ ಬಂದಿದ್ದು, ನೇರ ಬಾಲಾಜಿ ಅವರ ಕೊಠಡಿಯತ್ತ ತೆರಳಿದ್ದಾರೆ. ರೋಗಿಯ ಬಂಧು ಎಂದು ಪರಿಚಯವಿದ್ದರಿಂದ ಕೊಠಡಿ ಒಳಗೆ ಪ್ರವೇಶಿಸಲು ಅವಕಾಶ ನೀಡಿದ್ದಾರೆ. ಒಂದು ಹಂತದಲ್ಲಿ ಜೇಬಿನಲ್ಲಿ ಇಟ್ಟುಕೊಂಡಿದ್ದ ಚಾಕು ತೆಗೆದು ವೈದ್ಯರಿಗೆ ಇರಿಯಲು ಆರಂಭಿಸಿದ್ದಾನೆ. ತಲೆಗೆ ನಾಲ್ಕು ಬಾರಿ, ಕತ್ತಿನ ಭಾಗ, ಕುತ್ತಿಗೆ, ತೋಳಿನ ಬಳಿ ತಲಾ ಒಂದು ಬಾರಿ ಇರಿಯಲಾಗಿದೆ. ಒಟ್ಟು ಏಳು ಬಾರಿ ಇರಿಯಲಾಗಿದೆ.
ವಿಪಕ್ಷಗಳ ತರಾಟೆ: ಘಟನೆ ಹಿಂದೆಯೇ ವಿರೋಧಪಕ್ಷಗಳು ರಾಜ್ಯದ ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿವೆ.
ಇನ್ನೊಂದೆಡೆ, ಕೃತ್ಯವನ್ನು ಖಂಡಿಸಿ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ದಿಢೀರ್ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥನ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಪಡಿಸಿದ್ದಾರೆ.
ತಮಿಳುನಾಡು ಸರ್ಕಾರಿ ವೈದ್ಯರ ಸಂಘವು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಸರ್ಕಾರದ ಜೊತೆಗೆ ನಡೆದ ಮಾತುಕತೆ ಫಲಪ್ರದವಾದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಟ್ಟಿತು.
ಆಸ್ಪತ್ರೆಯ ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಹಾಗೂ ಪ್ರವೇಶ ದ್ವಾರದಲ್ಲಿ ಥರ್ಮಲ್ ಪರಿಶೀಲನಾ ಘಟಕ ಅಳವಡಿಸಲು ಸೂಚಿಸಿ ಸರ್ಕಾರ ಮಧ್ಯಾಹ್ನದ ವೇಳೆಗೆ ಆದೇಶ ಹೊರಡಿಸಿದೆ.
ಆರೋಪಿ ವಿಘ್ನೇಶ್ ವಿರುದ್ದ ಭಾರತೀಯ ನ್ಯಾಯಸಂಹಿತೆಯ ವಿವಿಧ ಪ್ರಕರಣಗಳಡಿ ಮೊಕದ್ದಮೆ ದಾಖಲಿಸಲಾಗಿದೆ.
ಖಾಸಗಿ ಆಸ್ಪತ್ರೆಯವರು, ನಿಮ್ಮ ತಾಯಿಗೆ ತಪ್ಪಾಗಿ ಚಿಕಿತ್ಸೆ ನೀಡಿರುವುದೇ ಅವರಿಗೆ ಉಸಿರಾಟದ ಸಮಸ್ಯೆ ಬಾಧಿಸಲು ಕಾರಣವಾಗಿದೆ ಎಂದು ಹೇಳಿರುವುದು ಕೃತ್ಯಕ್ಕೆ ಕಾರಣ ಎನ್ನಲಾಗಿದೆ.
ಕೃತ್ಯದ ನಂತರ ಚಾಕುವನ್ನು ಕಿಟಕಿಯಿಂದ ಹೊರಗೆ ಎಸೆದು ಕಾರಿಡಾರ್‌ನಲ್ಲಿ ವಿಘ್ನೇಶ್ ಸಹಜವಾಗಿ ನಡೆದುಹೋಗುತ್ತಿರುವುದು ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ಘಟನೆಯು ಭದ್ರತಾ ಲೋಪ ಎಂಬುದಕ್ಕಿಂತಲೂ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ವೈದ್ಯರ ಮೇಲೆ ಆಗುತ್ತಿರುವ ಒತ್ತಡದ ಪ್ರಮಾಣವನ್ನು ಬಿಂಬಿಸುತ್ತದೆ ಎಂದು ಆಸ್ಪತ್ರೆಯ ವೈದ್ಯರು 'ಪ್ರಜಾವಾಣಿ' ಜೊತೆಗೆ ಅಭಿಪ್ರಾಯ ಹಂಚಿಕೊಂಡರು.