ಢಾಕಾ: ದೇಶದ್ರೋಹ ಆರೋಪದಡಿ ಹಿಂದೂ ಮುಖಂಡರೊಬ್ಬರ ಬಂಧನದಿಂದ ಉಂಟಾದ ಪೊಲೀಸರು ಹಾಗೂ ಬೆಂಬಲಿಗರ ನಡುವಿನ ಘರ್ಷಣೆಯಲ್ಲಿ ವಕೀಲರೊಬ್ಬರು ಮೃತಪಟ್ಟಿದ್ದನ್ನು ಪರಿಗಣಿಸಿ ಇಸ್ಕಾನ್ ನಿಷೇಧಿಸಬೇಕು ಎಂಬ ಕೋರಿಕೆಯುಳ್ಳ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಘಟನೆಯ ನಂತರ ಅಂತರರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಸ್ಥೆ (ಇಸ್ಕಾನ್) ನಿಷೇಧಕ್ಕೆ ವಕೀಲರೊಬ್ಬರು ಆಗ್ರಹಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಇತ್ತೀಚಿನ ಬೆಳವಣಿಗೆ ನಂತರ ಇಸ್ಕಾನ್ ಕುರಿತು ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಟಾರ್ನಿ ಜನರಲ್ ಅವರನ್ನು ಕೇಳಿತು.
ಬಾಂಗ್ಲಾದೇಶದ ಹಿಂದೂ ಮುಖಂಡ ಚಿನ್ಮಯ ಕೃಷ್ಣ ದಾಸ್ ಅವರನ್ನು ಕೆಲ ದಿನಗಳ ಹಿಂದೆ ಇಸ್ಕಾನ್‌ನಿಂದ ಉಚ್ಛಾಟಿಸಲಾಗಿತ್ತು. ನಂತರ ಅವರ ಬಂಧನವಾಯಿತು. ಇದರಿಂದಾಗಿ ಬಾಂಗ್ಲಾದೇಶದಲ್ಲಿ ಗಲಭೆ ಆರಂಭವಾಯಿತು. ಇದರಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಸೈಫುಲ್ ಇಸ್ಲಾಮ್ ಅವರ ಹತ್ಯೆಯಾಯಿತು.
'ವಕೀಲ ಸೈಫುಲ್ ಅವರ ಕೊಲೆ, ಇಸ್ಕಾನ್‌ನ ಕಾರ್ಯಾಚರಣೆ ಹಾಗೂ 33 ಜನರನ್ನು ಬಂಧಿಸಿರುವುದು ಸೇರಿದಂತೆ ಮೂರು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ' ಎಂದು ಅಟಾರ್ನಿ ಜನರಲ್ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, 'ಬಾಂಗ್ಲಾದೇಶ ನೆಲದ ಕಾನೂನು ಮತ್ತು ಸುವ್ಯವಸ್ಥೆ, ಇಲ್ಲಿನ ನಾಗರಿಕರು, ಆಸ್ತಿಯ ರಕ್ಷಣೆಗೆ ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವ ಭರವಸೆ ಇದೆ' ಎಂದಿತು.
ದಾಸ್ ಬಂಧನಕ್ಕೆ ಭಾರತ ಕಳವಳ
ದಾಸ್ ಅವರ ಬಂಧನ ಮತ್ತು ಜಾಮೀನು ನಿರಾಕರಣೆ ಕುರಿತು ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಬಾಂಗ್ಲಾದಲ್ಲಿನ ಅಲ್ಪಸಂಖ್ಯಾತರಾದ ಹಿಂದೂಗಳ ಸುರಕ್ಷತೆ ಹಾಗೂ ಭದ್ರತೆಗೆ ಅಗತ್ಯ ಕ್ರಮಗಳನ್ನು ಢಾಕಾ ಕೈಗೊಳ್ಳಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.
ಇಸ್ಕಾನ್ ತೀವ್ರವಾದಿ ಸಂಘಟನೆಯಾಗಿದ್ದು, ಅದನ್ನು ಕೂಡಲೇ ನಿಷೇಧಿಸಬೇಕು ಎಂದು ಆಗ್ರಹಿಸಿ ಸುಪ್ರೀಂ ಕೋರ್ಟ್‌ನ ವಕೀಲರು ಬಾಂಗ್ಲಾದೇಶ ಸರ್ಕಾರಕ್ಕೆ ಬುಧವಾರ ಪತ್ರ ಬರೆದಿದ್ದಾರೆ.
'ಬಾಂಗ್ಲಾದೇಶದಲ್ಲಿ ಜನಾಂಗೀಯ ಹಿಂಸಾಚಾರ ಪ್ರಚೋದಿಸುತ್ತಿರುವ ಇಸ್ಕಾನ್ ಸಂಘಟನೆಯನ್ನು ನಿಷೇಧಿಸಬೇಕು. ಇಸ್ಕಾನ್ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಆದರೆ ಅದರ ಹಿಂದೆ, ದೇಶದಲ್ಲಿ ಹಿಂಸಾಚಾರ ಹರಡುವುದೇ ಅದರ ಉದ್ದೇಶವಾಗಿದೆ. ಹಿಂದೂ ಸಂಪ್ರದಾಯಗಳನ್ನು ಜನರ ಮೇಲೆ ಹೇರುವುದು ಹಾಗೂ ಹಿಂದೂ ಸಮುದಾಯದ ಕೆಳಜಾತಿಗಳ ಜನರನ್ನು ಬಲವಂತದಿಂದ ತಮ್ಮ ಸಂಘಟನೆಗೆ ಸೇರಿಸಿಕೊಳ್ಳುವ ಕೆಲಸವನ್ನು ಈ ಸಂಘಟನೆ ಮಾಡುತ್ತಿದೆ' ಎಂದು ಆರೋಪಿಸಲಾಗಿದೆ.
ಈ ನಡುವೆ ದಾಸ್ ಬಂಧವನ್ನು ಇಸ್ಕಾನ್ ಖಂಡಿಸಿದೆ. ಜತೆಗೆ, ದೇಶದಲ್ಲಿ ಹಿಂದೂಗಳಿಗೂ ಸಹಬಾಳ್ವೆಗೆ ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದೆ.
ಬಾಂಗ್ಲಾದೇಶ ಸನಾತನಿ ಜಾಗ್ರಣ ಜೋತೆಯ ವಕ್ತಾರ ದಾಸ್ ಅವರನ್ನು ಢಾಕಾದ ಹಜರತ್ ಶಹಾಜಲಾಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬಂಧಿಸಲಾಗಿತ್ತು. ಚಿತ್ತೋಗ್ರಾಮದಲ್ಲಿ ಆಯೋಜನೆಗೊಂಡಿದ್ದ ಜಾಥಾದಲ್ಲಿ ದಾಸ್‌ಗೆ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ದಾಸ್‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ, ಚಿತ್ತೋಗ್ರಾಮ್‌ದಲ್ಲಿರುವ ಜೈಲಿಗೆ ಕಳುಹಿಸಿತು.