ಕಾಸರಗೋಡು: ಜಿಲ್ಲೆಯ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳ ಶಾಲಾ ಶಿಕ್ಷಣ ಗುಣಮಟ್ಟ ಹೆಚ್ಚಿಸುವುದರ ಅಂಗವಾಗಿ ಹತ್ತು ದಿನಗಳೊಳಗೆ ಸ್ಥಳೀಯ ಮಟ್ಟದ ಸಮಿತಿಗಳ ಸಭೆ ಆಯೋಜಿಸಲು ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ ತೀರ್ಮಾನಿಸಿದೆ.
ಸ್ಥಳೀಯಾಡಳಿತ ಸಂಸ್ಥೆಗಳು ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಭೆ ನಡೆಸಲು ಮುಂದಾಗಬೇಕು. ಪರಿಶಿಷ್ಟ ವರ್ಗ ಉನ್ನತಿಗಳಲ್ಲಿ (ಕಾಲನಿ) ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಣೆ ನಡೆಸಲು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಜಿಲ್ಲಾ ಮಟ್ಟದ ಸಮನ್ವಯ ಸಮಿತಿಯು ಪಂಚಾಯಿತಿ ಮಟ್ಟದ ಸ್ಥಳೀಯ ಸಮಿತಿಗಳ ಪ್ರಸ್ತಾವನೆಗಳು ಮತ್ತು ನಿರ್ಣಯಗಳ ಕುರಿತು ಚರ್ಚೆ ನಡೆಸಲಿದೆ. ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳು ಅರ್ಧದಲ್ಲಿ ಶಾಲೆ ಬಿಡುವುದನ್ನು ತಡೆಗಟ್ಟಲು ಹಾಗೂ ಶಾಲಾ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಸ್ಥಳೀಯ ಭಾಷೆಗಳಲ್ಲಿ ಕಲಿಸಲು ಸಾಮೂಹಿಕ ಕಲಿಕಾ ಕೊಠಡಿಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಸೂಚಿಸಲಾಯಿತು.
ಜಿಲ್ಲೆಯ ಪರಿಶಿಷ್ಟ ವರ್ಗ ವಿದ್ಯಾರ್ಥಿಗಳ ಶಾಲಾ ಶಿಕ್ಷಣದ ಗುಣಮಟ್ಟ ಸುಧಾರಣೆಯ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ಡೆಪ್ಯುಟಿ ಕಲೆಕ್ಟರ್ ಪಿ.ಸುರ್ಜಿತ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿ ಎಸ್.ಶ್ಯಾಮಲಕ್ಷ್ಮಿ, ಜಿಲ್ಲಾ ಸಾಮಾಜಿಕ ನ್ಯಾಯ ಅಧಿಕಾರಿ ಆರ್ಯ ಪಿ.ರಾಜ್, ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿ ವಿ.ದಿನೇಶ, ಜಿಲ್ಲಾ ವಾರ್ತಾ ಅಧಿಕಾರಿ ಎಂ.ಮಧುಸೂದನನ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕಚೇರಿಯ ಆಡಳಿತ ಸಹಾಯಕ ಕೆ.ಶೌಕತ್ತಲಿ, ಉಪ ಯೋಜನಾಧಿಕಾರಿ ಎಂ. ಧ್ವಾರ, ಚೆರ್ಕಳ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಟಿ.ವಿ.ವಿನೋದ್ ಕುಮಾರ್, ಡಯಟ್ ಉಪನ್ಯಾಸಕ ಗಿರೀಶ್ ಬಾಬು, ಅರಣ್ಯಾಧಿಕಾರಿ ಕೆ.ಬಾಬು ಮೊದಲಾದವರು ಉಪಸ್ಥಿತರಿದ್ದರು.