HEALTH TIPS

ನಾನು ಏಕಸ್ವಾಮ್ಯ ವಿರೋಧಿ: ತಮ್ಮ ಲೇಖನ ಟೀಕಿಸಿದ ಬಿಜೆಪಿಗೆ ರಾಹುಲ್‌ ತಿರುಗೇಟು

         ವದೆಹಲಿ: ದೇಶದ ಉದ್ಯಮ ಕ್ಷೇತ್ರ ಕುರಿತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮಾಧ್ಯಮಗಳಲ್ಲಿ ಪ್ರಕಟಿಸಿದ ಲೇಖನವೊಂದು ಈಗ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವಿನ ಜಟಾಪಟಿಗೆ ಕಾರಣವಾಗಿದೆ.

           'ಬಿಜೆಪಿ ಟೀಕಿಸುತ್ತಿರುವಂತೆ ನಾನು ಉದ್ಯಮ ವಿರೋಧಿ ಅಲ್ಲ. ನಾನು ಏಕಸ್ವಾಮ್ಯದ ವಿರೋಧಿ ಹಾಗೂ ಏಕಸ್ವಾಮ್ಯ ಸಂಸ್ಥೆಗಳ ಸೃಷ್ಟಿಯ ವಿರೋಧಿ' ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಗುರುವಾರ ಹೇಳಿದ್ದಾರೆ.

           'ದಿ ಇಂಡಿಯನ್‌ ಎಕ್ಸ್‌ಪ್ರೆಸ್‌' ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದ ಅವರ ಲೇಖನ ಕುರಿತು ವ್ಯಕ್ತವಾದ ಟೀಕೆಗಳಿಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

'ಈಸ್ಟ್‌ ಇಂಡಿಯಾ ಕಂಪನಿಯನ್ನು ಸುಮಾರು 150 ವರ್ಷಗಳ ಹಿಂದೆ ಮುಚ್ಚಲಾಯಿತು. ಆದರೆ, ಕಂಪನಿಯು ಆಗ ಸೃಷ್ಟಿಸಿದ್ದ ಭಯವು ಈಗ ಬೇರೆ ರೂಪದಲ್ಲಿ ಕಾಣಿಸಿಕೊಂಡಿದೆ. ಹೊಸ ತಲೆಮಾರಿನ ಏಕಸ್ವಾಮ್ಯವಾದಿಗಳು ಈ ಜಾಗವನ್ನು ತುಂಬಿದ್ದಾರೆ' ಎಂದು ರಾಹುಲ್‌ ಗಾಂಧಿ ಅವರು ಲೇಖನದಲ್ಲಿ ಬರೆದಿದ್ದರು.

            'ಪ್ರಗತಿಪರ ಭಾರತದ ಉದ್ಯಮಕ್ಕೆ ಹೊಸ ಶಕ್ತಿ ತುಂಬುವ ಕಾಲ ಈಗ ಬಂದಿದೆ' ಎಂದೂ ಅವರು ತಮ್ಮ ಲೇಖನದಲ್ಲಿ ಪ್ರತಿಪಾದಿಸಿದ್ದರು.

             ತಮ್ಮ ಲೇಖನದ ವಿರುದ್ಧ ಕೇಳಿ ಬಂದ ಟೀಕೆಗಳಿಗೆ ಪ್ರತಿಕ್ರಿಯೆಯಾಗಿ ವಿಡಿಯೊವೊಂದನ್ನು 'ಎಕ್ಸ್‌'ನಲ್ಲಿ ಹಂಚಿಕೊಂಡಿರುವ ರಾಹುಲ್‌ ಗಾಂಧಿ, 'ಕೆಲ ಸಂಗತಿ ಸ್ಪಷ್ಟಪಡಿಸಲು ನಾನು ಬಯಸುತ್ತೇನೆ. ಬಿಜೆಪಿಯಲ್ಲಿರುವ ನನ್ನ ಕೆಲ ವಿರೋಧಿಗಳು, ನಾನು ಉದ್ಯಮ ವಿರೋಧಿ ಎಂಬಂತೆ ಬಿಂಬಿಸುತ್ತಿದ್ದಾರೆ. ಆದರೆ, ನಾನು ಉದ್ಯಮ ವಿರೋಧಿ ಅಲ್ಲ. ನಾನು ಏಕಸ್ವಾಮ್ಯ ವಿರೋಧಿ. ಒಬ್ಬರು ಅಥವಾ ಇಬ್ಬರು ಇಲ್ಲವೇ 5 ಜನರು ಉದ್ಯಮ ಕ್ಷೇತ್ರದ ಮೇಲೆ ಪ್ರಾಬಲ್ಯ ಹೊಂದುವುದರ ವಿರೋಧಿ ನಾನು' ಎಂದಿದ್ದಾರೆ.

'ನಾನು ಮ್ಯಾನೇಜ್‌ಮೆಂಟ್‌ ಕನ್ಸಲ್ಟಂಟ್‌ ಆಗಿ ನನ್ನ ವೃತ್ತಿ ಆರಂಭಿಸಿದೆ. ಒಂದು ಉದ್ಯಮದ ಯಶಸ್ಸಿಗೆ ಏನೆಲ್ಲಾ ಅಗತ್ಯ ಎಂಬುದರ ಅರಿವು ನನಗಿದೆ. ನಾನು ಉದ್ಯೋಗಗಳ ಪರ, ಉದ್ಯಮಗಳ ಪರ, ನಾವೀನ್ಯ ಹಾಗೂ ಸ್ಪರ್ಧಾತ್ಮಕತೆ ಪರ ಹಾಗೂ ಏಕಸ್ವಾಮ್ಯ ವಿರೋಧಿ' ಎಂದು ಹೇಳಿದ್ದಾರೆ.

ಬಿಜೆಪಿ ವಾಗ್ದಾಳಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದ್ದು, 'ಎಕ್ಸ್‌'ನಲ್ಲಿ ಪೋಸ್ಟ್‌ ಮಾಡಿದೆ.

           ''ಮ್ಯಾಚ್‌ ಫಿಕ್ಸಿಂಗ್ ಏಕಸ್ವಾಮ್ಯ ಗುಂಪುಗಳು ವರ್ಸಸ್ ನ್ಯಾಯಯುತ ಉದ್ದಿಮೆಗಳು' ಎಂಬ ಮಾತುಗಳೊಂದಿಗೆ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ಮಾಡಿರುವ ಮತ್ತೊಂದು ಆಪಾದನೆ ದಾರಿ ತಪ್ಪಿಸುವಂತಿದೆ' ಎಂದು ಟೀಕಿಸಿದೆ.

          'ಆತ್ಮೀಯ ಬಾಲಕ ಬುದ್ಧಿ, ಸಂಗತಿಗಳನ್ನು ಪರಾಮರ್ಶೆ ಮಾಡದೇ ನಿರ್ಣಯಕ್ಕೆ ಬರಬೇಡಿ' ಎಂದು ಪೋಸ್ಟ್‌ ಮಾಡುವ ಮೂಲಕ ರಾಹುಲ್ ವಿರುದ್ಧ ಪರೋಕ್ಷ ದಾಳಿ ನಡೆಸಿದೆ.

ಸಿಂಧಿಯಾ ವಿರುದ್ಧ ಕಾಂಗ್ರೆಸ್‌ ಟೀಕೆ

           ಲೇಖನ ವಿಚಾರವಾಗಿ ರಾಹುಲ್‌ ಗಾಂಧಿ ವಿರುದ್ಧ ಟೀಕೆ ಮಾಡಿರುವ ಕೇಂದ್ರ ಸಚಿವ ಹಾಗೂ ಬಿಜೆಪಿ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ವಿರುದ್ಧ ಕಾಂಗ್ರೆಸ್‌ ಗುರುವಾರ ಹರಿಹಾಯ್ದಿದೆ. 'ಸಿಂಧಿಯಾ ರಾಜಮನೆತನದವರು ಬ್ರಿಟಿಷರ ಕಾಲದಲ್ಲಿ ಈಸ್ಟ್‌ ಇಂಡಿಯಾ ಕಂಪನಿ ಬೆಂಬಲಿಸಿದ್ದರು' ಎಂದು ಕಾಂಗ್ರೆಸ್‌ ಟೀಕಿಸಿದೆ. 'ದ್ವೇಷವನ್ನೇ ಹರಡುವವರಿಗೆ ಭಾರತದ ಇತಿಹಾಸ ಮತ್ತು ಗೌರವ ಕುರಿತು ಮಾತನಾಡುವ ಹಕ್ಕು ಇಲ್ಲ' ಎಂದು ಕುಟುಕಿದೆ. ರಾಹುಲ್‌ ಗಾಂಧಿ ಲೇಖನ ಕುರಿತು 'ಎಕ್ಸ್‌'ನಲ್ಲಿ ಬುಧವಾರ ಪ್ರತಿಕ್ರಿಯಿಸಿದ್ದ ಸಿಂಧಿಯಾ 'ಭಾರತದ ಶ್ರೀಮಂತ ಪರಂಪರೆ ಕುರಿತು ರಾಹುಲ್‌ ಗಾಂಧಿ ಹೊಂದಿರುವ ಅಜ್ಞಾನ ಹಾಗೂ ಅವರಲ್ಲಿನ ವಸಾಹತುಶಾಹಿ ಮನಸ್ಥಿತಿ ಎಲ್ಲ ಎಲ್ಲೆಗಳನ್ನು ಮೀರಿವೆ' ಎಂದು ಹೇಳಿದ್ದರು. 'ಸಿಂಧಿಯಾ ಅವರೇ ಉದ್ಯಮ ಕ್ಷೇತ್ರದಲ್ಲಿನ ಏಕಸ್ವಾಮ್ಯದ ಮೇಲಿನ ರಾಹುಲ್‌ ಗಾಂಧಿ ಅವರ ದಾಳಿಯನ್ನು ನೀವು ತೀರ ವೈಯಕ್ತಿಕವಾಗಿ ತೆಗೆದುಕೊಂಡಿದ್ದೀರಿ. ಈಸ್ಟ್‌ ಇಂಡಿಯಾ ಕಂಪನಿಯು ದೇಶದ ನವಾಬರು ರಾಜರು ಹಾಗೂ ರಾಣಿಯರನ್ನು ಬೆದರಿಸಿ ಅವರನ್ನು ತಮ್ಮ ಗುಲಾಮರನ್ನಾಗಿ ಮಾಡಿ ಭಾರತವನ್ನು ಲೂಟಿ ಮಾಡಿತ್ತು' ಎಂದು ಕಾಂಗ್ರೆಸ್‌ನ ಮಾಧ್ಯಮ ಘಟಕದ ಮುಖ್ಯಸ್ಥ ಪವನ್ ಖೇರಾ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries