ಕಾಸರಗೋಡು: ಅಡುಗೆಮನೆಯಲ್ಲಿ ಬಂಧಿಯಾಗಿರುವ ಮಹಿಳೆಯನ್ನು ಚಿತ್ರಿಸುವ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ಚಿತ್ರಕಲಾವಿದರೊಬ್ಬರು ಅಡುಗೆ ಮನೆಯನ್ನು ಮುಖಮಂಟಪವನ್ನಾಗಿ ಮಾಡಿ ರಚಿಸಿರುವ ಕೃತಿ ಅಪೂರ್ವವಾದುದು ಎಂದು ಖ್ಯಾತ ವಿಮರ್ಶಕ ಹಾಗೂ ಲೇಖಕ ಕೆ.ಸಿ. ನಾರಾಯಣನ್ ಹೇಳಿದರು.
ಸಮ್ಮಿಲನ ಕಾಸರಗೋಡು, ಮನೋರಮಾ ಹೊರ್ಟಸ್ ಮತ್ತು ಆಟ್ರ್ಸ್ ಕಿಚನ್ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಖ್ಯಾತ ಚಿತ್ರಕಲಾವಿದ ಬಾರಾ ಭಾಸ್ಕರನ್ ಬರೆದ ‘ಅಡುಕ್ಕಳ, ಉತ್ತರ ಮಲಬಾರಿನ ಅಡುಗೆ ಮತ್ತು ಕಥೆಗಳು’ ಪುಸ್ತಕವನ್ನು ಇತ್ತೀಚೆಗೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕೆಳವರ್ಗದವರ ಇತಿಹಾಸ, ಸಂಸ್ಕøತಿಯನ್ನು ಸಾರುವ ಈ ಪುಸ್ತಕಕ್ಕೆ ಮಲಯಾಳಂನಲ್ಲಿ ಈಹಿಂದೆ ಇಂತಹ ಕೃತಿಬಂದಿರುವ ಬಗ್ಗೆ ನಿದರ್ಶನಗಳಿಲ್ಲ ಎಂದರು.
ನಿರೂಪಕಿ ಸಿತಾರಾ ಎಸ್ ಪುಸ್ತಕ ಸ್ವೀಕರಿಸಿದರು. ವಿಮರ್ಶಕ ಹಾಗೂ ಸಾಂಸ್ಕøತಿಕ ಹೋರಾಟಗಾರ ಇ.ಪಿ.ರಾಜಗೋಪಾಲನ್ ಪುಸ್ತಕ ಪರಿಚಯಿಸಿದರು. ಉತ್ತರ ಕೇರಳದ ಬೇರುಗಳನ್ನು ಹುಡುಕುವ ಈ ಕೃತಿಯು ಕಥೆ ಮತ್ತು ಇತಿಹಾಸದ ಅಪರೂಪದ ಸಂಯೋಜನೆಯಾಗಿದೆ ಎಂದು ಇ.ಪಿ. ರಾಜಗೋಪಾಲನ್ ಹೇಳಿದರು.
ಜಿ.ಬಿ. ವತ್ಸನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಖ್ಯಾತ ಕಥೆಗಾರ ಡಾ.ಅಂಬಿಕಾಸುತನ್ ಮಂಙಡ್ ಅವರು ಕಾಸರಗೋಡಿನವರೇ ಆದ ಬಾರಾ ಭಾಸ್ಕರನ್ ಅವರು ದೇಶದ ಅತ್ಯುತ್ತಮ ಚಿತ್ರಕಲಾವಿದರಾಗಿ ಬೆಳೆದ ಹಿನ್ನೆಲೆ ಮತ್ತು ವ್ಯಕ್ತಿತ್ವದ ವೈಶಿಷ್ಟ್ಯಗಳನ್ನು ವಿವರಿಸಿದರು.
ಕೃತಿಕಾರ ಬಾರಾ ಭಾಸ್ಕರನ್ ಮಾತನಾಡಿ, ಈ ಕೃತಿಯನ್ನು ಬರೆಯಲು ತನಗೆ ಪ್ರೇರಣೆಯಾದದ್ದನ್ನು ಸಭಿಕರೊಂದಿಗೆ ಹಂಚಿಕೊಂಡರು.