ಲಂಡನ್ : ಗಾಝಾ ಮತ್ತು ಲೆಬನಾನ್‍ನಲ್ಲಿ ನಾಗರಿಕರ ಮೇಲೆ ಆಗುತ್ತಿರುವ ಹಾನಿಯ ಬಗ್ಗೆ ಹೆಚ್ಚುತ್ತಿರುವ ಪುರಾವೆಗಳ ಹಿನ್ನೆಲೆಯಲ್ಲಿ ದಹನಕಾರಿ ಆಯುಧಗಳ( ಸ್ಫೋಟಗೊಂಡ ಬಳಿಕ ಬೆಂಕಿ ಹರಡುವ ಬಾಂಬ್, ಕ್ಷಿಪಣಿ ಇತ್ಯಾದಿ ಶಸ್ತ್ರಾಸ್ತ್ರಗಳು) ಬಳಕೆಯನ್ನು ನಿಷೇಧಿಸುವ ಬಗ್ಗೆ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕು ಎಂದು ಮಾನವ ಹಕ್ಕುಗಳ ನಿಗಾ ಏಜೆನ್ಸಿ(ಎಚ್‍ಆರ್‍ಡಬ್ಲ್ಯೂ) ಆಗ್ರಹಿಸಿದೆ.
ಅಸಹನೀಯ ಸುಟ್ಟಗಾಯಗಳು, ಉಸಿರಾಟಕ್ಕೆ ತೊಂದರೆ ಮತ್ತು ಮಾನಸಿಕ ಆಘಾತವನ್ನು ಉಂಟು ಮಾಡಬಹುದಾದ ಈ ಶಸ್ತ್ರಾಸ್ತ್ರಗಳ ಇತ್ತೀಚಿಗಿನ ಬಳಕೆಯನ್ನು ಪರಿಶೀಲಿಸಿ ಸಿದ್ಧಪಡಿಸಲಾಗಿರುವ 28 ಪುಟಗಳ ವರದಿಯನ್ನು ಎಚ್‍ಆರ್‍ಡಬ್ಲ್ಯೂ ಬಿಡುಗಡೆಗೊಳಿಸಿದೆ. ಇಂತಹ ಶಸ್ತ್ರಾಸ್ತ್ರಗಳ ದಾಳಿಯಲ್ಲಿ ಬದುಕುಳಿದವರು, ವೈದ್ಯಕೀಯ ವೃತ್ತಿಪರರು ಮತ್ತು ನಾಗರಿಕ ಸಮಾಜದ ಸದಸ್ಯರ ಸಂದರ್ಶನವನ್ನು ವರದಿ ಒಳಗೊಂಡಿದೆ.
ಸಾಂಪ್ರದಾಯಕ ಶಸ್ತ್ರಾಸ್ತ್ರಗಳ ಒಪ್ಪಂದಕ್ಕೆ ಸಹಿ ಹಾಕಿರುವ ರಾಷ್ಟ್ರಗಳ ಸಮಾವೇಶಕ್ಕೂ ಮುನ್ನ ಈ ವರದಿ ಬಿಡುಗಡೆಯಾಗಿದೆ. ದಹನಕಾರಿ ಆಯುಧಗಳ ಬಳಕೆಯನ್ನು ಖಂಡಿಸುವಂತೆ ಮತ್ತು ನಾಗರಿಕರ ರಕ್ಷಣೆಗೆ ಸಂಬಂಧಿಸಿದ ಕಾನೂನಿನ ಲೋಪದೋಷಗಳನ್ನು ಸರಿಪಡಿಸುವಂತೆ ಎಚ್‍ಆರ್‍ರಡಬ್ಲ್ಯೂ ಆಗ್ರಹಿಸಿದೆ.
ನಾಗರಿಕರ ಜೀವನ ಮತ್ತು ಜೀವನೋಪಾಯಕ್ಕೆ ಅಪಾಯವನ್ನುಂಟು ಮಾಡುವ ಬೆಂಕಿ ಹರಡುವ ಶಸ್ತ್ರಾಸ್ತ್ರಗಳನ್ನು ಹಲವು ಸಂಘರ್ಷಗಳಲ್ಲಿ ಬಳಸಲಾಗುತ್ತಿದೆ. ಈ ಶಸ್ತ್ರಾಸ್ತ್ರಗಳ ಭೀಕರ ಪರಿಣಾಮಗಳಿಂದ ನಾಗರಿಕರು, ನಾಗರಿಕ ಮೂಲಸೌಕರ್ಯ ಮತ್ತು ಪರಿಸರವನ್ನು ರಕ್ಷಿಸಲು ಸರ್ಕಾರಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಎಚ್‍ಆರ್‍ಡಬ್ಲ್ಯೂದ ಹಿರಿಯ ಶಸ್ತ್ರಾಸ್ತ್ರ ಸಲಹೆಗಾರ ಬೋನಿ ಡೊಚೆರ್ಟಿ ಆಗ್ರಹಿಸಿದ್ದಾರೆ.
2023ರ ಅಕ್ಟೋಬರ್ ನಿಂದ ಗಾಝಾ ಮತ್ತು ಲೆಬನಾನ್‍ನ ಜನನಿಬಿಡ ಪ್ರದೇಶಗಳಲ್ಲಿ ನಿರ್ವಾತ ಬಾಂಬ್ ಹಾಗೂ ನೆಲದಿಂದ ಪ್ರಯೋಗಿಸುವ ಬಿಳಿ ರಂಜಕದ ಯುದ್ಧ ಸಾಮಾಗ್ರಿಗಳನ್ನು ಇಸ್ರೇಲ್ ವ್ಯಾಪಕವಾಗಿ ಬಳಸಿರುವುದಕ್ಕೆ ಛಾಯಾಚಿತ್ರಗಳು ಸಾಕ್ಷಿಯಾಗಿವೆ.