ಕಾಸರಗೋಡು : ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾದ 'ಕಾಸರಗೋಡು ಸೀರೆ' ಮಾರಾಟ ಮೇಳದಲ್ಲಿ ಜಿಲ್ಲಾ ಪಂಚಾಯಿತಿ ನೌಕರರಿಗಾಗಿ ಡ್ರೆಸ್ ಕೋಡ್ ನಿರ್ಧರಿಸಲಾಗಿದ್ದು, ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಸಮವಸ್ತ್ರ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ಅವರು ಜಿಲ್ಲಾ ಪಂಚಾಯಿತಿ ಅಧ್ಯಕ್ಷಯಿಂದ ಸೀರೆ ಸ್ವೀಕರಿಸುವ ಮೂಲಕ ಮೊದಲ ಮಾರಾಟ ನಡೆಸಿದರು.
ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಂ. ಮನು, ಎಸ್.ಎನ್. ಸರಿತಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಪ್ರಧಾನ ವ್ಯವಸ್ಥಾಪಕ ಕೆ. ಸಜಿತ್ ಕುಮಾರ್, ಕಾಸರಗೋಡು ಸೀರೆಗಳ ವಿಶೇಷಾಧಿಕಾರಿ ಆದಿಲ್ ಮುಹಮ್ಮದ್, ಕಾಸರಗೋಡು ಸೀರೆ ಸಹಕಾರಿ ಸಂಘದ ಅಧ್ಯಕ್ಷ ಕೆ. ಮಾಧವ ಹೇರಳ ಮೊದಲಾದವರು ಪಾಲ್ಗೊಂಡಿದ್ದರು.
ಮೇಳದಲ್ಲಿ 46,739 ರೂ.ಗಳ ವಹಿವಾಟು ನಡೆದಿದ್ದು, 60 ಕಾಸರಗೋಡು ಸೀರೆಗಳು ಮಾರಾಟವಾಗಿವೆ. ಸೀರೆ, ಮುಂಡು, ಲುಂಗಿ, ಟವೆಲ್, ಚೂಡಿದಾರ್ ಟಾಪ್ ಮೆಟೀರಿಯಲ್ಸ್ ಹೀಗೆ ನಾನಾ ಉತ್ಪನ್ನಗಳು ಮಾರಾಟಮೇಳದಲ್ಲಿ ವ್ಯಾಪಾರಕ್ಕಿರಿಸಲಾಗಿತ್ತು. ಉದ್ಯೋಗಿಗಳು ಹಾಗೂ ವಿವಿಧ ಅಗತ್ಯಗಳಿಗಾಗಿ ಕಲೆಕ್ಟ್ರೇಟ್‍ಗೆ ಆಗಮಿಸಿದ್ದ ಜನರೂ ಸ್ಟಾಲ್‍ಗೆ ಭೇಟಿನೀಡಿ ಸೀರೆ ಖರೀದಿಸಿದರು. ಕಾಸರಗೋಡು ಸೀರೆ ಮಾರುಕಟ್ಟೆ ಮೇಳವನ್ನು ಕಾಞಂಗಾಡ್ ಮಿನಿ ಸಿವಿಲ್ ಸ್ಟೇಷನ್ ನಲ್ಲಿ ಆಯೋಜಿಸಬೇಕು ಎಂದು ನೌಕರರು ಆಗ್ರಹಿಸಿದರು.
ಚೀಟಿ ಎತ್ತುವ ಮೂಲಕ ಕ್ಯಾಶ್ ಬ್ಯಾಕ್, ಮಿನಿ ಸ್ಪರ್ಧೆಗಳು ಇತ್ಯಾದಿಗಳನ್ನು ಮಾರಾಟದ ಜೊತೆಗೆ ನಡೆಸಲಾಯಿತು. ಜಿಐ ಟ್ಯಾಗ್, ಕೈಮಗ್ಗ ಮಾರ್ಕ್ ಮತ್ತು ಭಾರತೀಯ ಕೈಮಗ್ಗ ಬ್ರಾಂಡ್ ಅನುಮೋದನೆಗಳು ಕಾಸರಗೋಡು ಸೀರೆಗಳ ಗುಣಮಟ್ಟವನ್ನು ಖಾತರಿಪಡಿಸುತ್ತದೆ.