ಕಾಸರಗೋಡು: ಮುಳಿಯಾರು ಪಂಚಾಯಿತಿ ವ್ಯಾಪ್ತಿಯ ತೋಟದಮೂಲೆ ಎಂಬಲ್ಲಿ ಚಿರತೆಯೊಂದು ನಾಯಿಯನ್ನು ಕಚ್ಚಿಕೊಂಡು ಹೋಗಿರುವ ಬಗ್ಗೆ ವದಂತಿ ಹರಡಿದ್ದು, ಈ ಪ್ರದೇಶದಲ್ಲಿ ಮತ್ತೆ ಚಿರತೆ ಸಂಚಾರದ ಭೀತಿ ಎದುರಾಗಿದೆ.
ಇಲ್ಲಿನ ನಿವಾಸಿ ಮಣಿಕಂಠನ್ ಎಂಬವರ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಕಾರಿನ ಅಡಿಭಾಗದಲ್ಲಿ ಮಲಗಿದ್ದ ಸಾಕುನಾಯಿಯನ್ನು ಚಿರತೆ ಕಚ್ಚಿಕೊಂಡು ಹೋಗಿತ್ತು. ಗುರುವಾರ ನಸುಕಿಗೆ ಜೋರಾಗಿ ನಾಯಿ ಬೊಗಳುತ್ತಿರುವುದನ್ನು ಕೇಳಿ ಎಚ್ಚರಗೊಂಡ ಮನೆಯವರು ಹೊರಬರುತ್ತಿದ್ದಂತೆ ಚಿರತೆ ನಾಯಿಯನ್ನು ಕಚ್ಚಿ ಎತ್ತಿಕೊಂಡು ಹೋಗುವ ದೃಶ್ಯ ಕಂಡಿರುವುದಾಗಿ ಮಣಿಕಂಠನ್ ತಿಳಿಸಿದ್ದಾರೆ.
ಮಣಿಕಂಠನ್ ನೀಡಿದ ಮಾಹಿತಿಯನ್ವಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದಾಗ ಪಂಜದ ಗುರುತು ಕಂಡು ಬಂದಿದ್ದು, ಇದು ನಾಯಿಯನ್ನು ಎತ್ತಿಕೊಂಡು ಹೋಗಿರುವ ಚಿರತೆಯದ್ದಾಗಿದೆ ಎಂದು ಖಚಿತಪಡಿಸಿದ್ದಾರೆ. ಕಳೆದ ಕೆಲವು ದಿವಸಗಳ ಹಿಂದೆ ಕಾನತ್ತೂರು, ಇರಿಯಣ್ಣಿ, ಪಾಣೂರು ಪ್ರದೇಶಗಳಲ್ಲಿ ಚಿರತೆ ಸಂಚಾರದ ಬಗ್ಗೆ ವ್ಯಾಪಕ ವದಂತಿ ಹರಡಿತ್ತು. ಚಿರತೆ ಸೆರೆಹಿಡಿಯಲು ಅರಣ್ಯಾಧಿಕಾರಿಗಳು ಬೋನುಇರಿಸಿದ್ದರೂ, ಪ್ರಯೋಜನವಾಗಿಲ್ಲ.