ನವದೆಹಲಿ: 'ಯಾವುದೇ ನಂಬಿಕೆ-ಶ್ರದ್ಧೆ ಇಲ್ಲದೆ, ಮೀಸಲಾತಿ ಪ್ರಯೋಜನ ಪಡೆಯುವ ಏಕೈಕ ಉದ್ದೇಶದಿಂದ ಮತಾಂತರವಾಗುವುದು ಸಂವಿಧಾನಕ್ಕೆ ವಂಚನೆ ಮಾಡಿದಂತೆ' ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.
'ಇತರ ಧರ್ಮದಲ್ಲಿ ನಿಜವಾದ ನಂಬಿಕೆಯನ್ನು ಹೊಂದಿಲ್ಲದೇ ಮೀಸಲಾತಿ ಪ್ರಯೋಜನವನ್ನು ಮಾತ್ರ ಪಡೆಯುವುದಕ್ಕಾಗಿ ಮತಾಂತರಗೊಳ್ಳುವುದಕ್ಕೆ ಅವಕಾಶ ಇಲ್ಲ.
ಇಂತಹ ದುರುದ್ದೇಶದಿಂದ ಮತಾಂತರವಾಗುವವರಿಗೆ ಮೀಸಲಾತಿ ನೀಡಿದಲ್ಲಿ ಅದು ಈ ವಿಚಾರಕ್ಕೆ ಸಂಬಂಧಿಸಿದ ಸಾಮಾಜಿಕ ತತ್ವಕ್ಕೇ ಕೊಡಲಿ ಪೆಟ್ಟು ನೀಡಿದಂತಾಗುತ್ತದೆ' ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿತ್ತಲ್ ಹಾಗೂ ಆರ್. ಮಹಾದೇವನ್ ಅವರು ಇದ್ದ ನ್ಯಾಯಪೀಠವು, ತಮಿಳುನಾಡಿನ ಸೆಲ್ವರಾಣಿ ಎಂಬುವವರು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿ ನ.26ರಂದು ಈ ತೀರ್ಪು ಪ್ರಕಟಿಸಿದೆ.
ಸೆಲ್ವರಾಣಿ ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಉದ್ಯೋಗ ಪಡೆಯುವ ಸಲುವಾಗಿ ತಾನು ಹಿಂದೂ ಧರ್ಮಕ್ಕೆ ಸೇರಿದ್ದಾಗಿ ಹೇಳಿಕೊಂಡಿದ್ದರು ಹಾಗೂ ಪರಿಶಿಷ್ಟ ಜಾತಿ ಪ್ರಮಾಣಪತ್ರಕ್ಕೆ ಅರ್ಜಿ ಸಲ್ಲಿಸಿದ್ದರು.
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದ ಸೆಲ್ವರಾಣಿ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡಲು ನಿರಾಕರಿಸಿ ಮದ್ರಾಸ್ ಹೈಕೋರ್ಟ್ ಜನವರಿ 24ರಂದು ತೀರ್ಪು ನೀಡಿತ್ತು.
ಇದನ್ನು ಪ್ರಶ್ನಿಸಿ ಸೆಲ್ವರಾಣಿ, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ ಮದ್ರಾಸ್ ಹೈಕೋರ್ಟ್ ಆದೇಶ ಎತ್ತಿ ಹಿಡಿದು ತೀರ್ಪಿತ್ತಿದೆ.
'ಒಬ್ಬ ವ್ಯಕ್ತಿ ಮತ್ತೊಂದು ಧರ್ಮಕ್ಕೆ ಮತಾಂತರವಾಗಿದ್ದಾರೆ ಎಂದರೆ, ಆ ಧರ್ಮದ ತತ್ವ, ಸಿದ್ಧಾಂತ ಹಾಗೂ ಅದು ಬೋಧಿಸುವ ಆಧ್ಯಾತ್ಮಿಕ ವಿಚಾರಗಳಿಂದ ಪ್ರೇರಣೆ ಪಡೆದ ನಂತರವೇ ಮತಾಂತರದ ನಿರ್ಧಾರ ಕೈಗೊಂಡಿದ್ದಾನೆ/ಕೈಗೊಂಡಿದ್ದಾಳೆ ಎಂದರ್ಥ' ಎಂದು ನ್ಯಾಯಮೂರ್ತಿ ಮಹಾದೇವನ್ ಅವರು ಬರೆದಿರುವ 21 ಪುಟಗಳ ತೀರ್ಪಿನಲ್ಲಿ ಹೇಳಲಾಗಿದೆ.
'ನ್ಯಾಯಪೀಠಕ್ಕೆ ಸಲ್ಲಿಸಿರುವ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ, ಅರ್ಜಿದಾರರು ಕ್ರೈಸ್ತ ಧರ್ಮ ಪಾಲಿಸುತ್ತಿರುವುದು ಹಾಗೂ ಚರ್ಚ್‌ಗಳಿಗೆ ನಿಯಮಿತವಾಗಿ ತೆರಳಿ, ಅಲ್ಲಿನ ಧಾರ್ಮಿಕ ವಿಧಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು ಎಂಬುದು ದೃಢಪಡುತ್ತದೆ' ಎಂದು ನ್ಯಾಯಪೀಠ ಹೇಳಿದೆ.
'ಅರ್ಜಿದಾರ ಮಹಿಳೆ ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿದ್ದರೂ, ಉದ್ಯೋಗ ಪಡೆಯುವುದಕ್ಕಾಗಿ ಆಕೆ ತಾನು ಹಿಂದೂ ಎಂಬುದಾಗಿ ಹೇಳಿಕೊಂಡು ಎಸ್‌ಸಿ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಸಿದ್ದರು. ಮಹಿಳೆಯ ಇಂತಹ ದ್ವಂದ್ವದಿಂದ ಕೂಡಿದ ಹಕ್ಕು ಪ್ರತಿಪಾದನೆ ಸಮರ್ಥನೀಯವಲ್ಲ. ಬ್ಯಾಪ್ಟಿಸಂ ನಂತರ ಆಕೆ ತನ್ನನ್ನು ಹಿಂದೂ ಎಂಬುದಾಗಿ ಗುರುತಿಸಿಕೊಳ್ಳಲು ಸಾಧ್ಯವಿಲ್ಲ' ಎಂದೂ ಪೀಠ ಹೇಳಿದೆ.
'ಅರ್ಜಿದಾರ ಮಹಿಳೆ ಮತ್ತೆ ಹಿಂದೂಧರ್ಮಕ್ಕೆ ಮತಾಂತರವಾಗಿದ್ದಾರೆ ಅಥವಾ ವಲ್ಲುವನ್ ಜಾತಿಯವರು ಅವರನ್ನು ಮತ್ತೆ ಸ್ವೀಕರಿಸಿದ್ದಾರೆ ಎಂಬುದನ್ನು ದೃಢಪಡಿಸುವ ಪುರಾವೆಗಳು ಇಲ್ಲ. ಅವರ ವಾದವನ್ನು ಪುಷ್ಟೀಕರಿಸುವಂತಹ ದಾಖಲೆಗಳು, ಈ ಸಂಬಂಧ ನಡೆದಿದ್ದ ಸಮಾರಂಭಗಳ ಕುರಿತ ಸಾಕ್ಷ್ಯಗಳು ಕೂಡ ಇಲ್ಲ' ಎಂದು ಪೀಠ ಹೇಳಿದೆ.
'ಸುಪ್ರೀಂ' ತೀರ್ಪಿನ ಪ್ರಮುಖಾಂಶಗಳು
* ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವವರು ತಮ್ಮ ಜಾತಿ ಗುರುತನ್ನು ಕಳೆದುಕೊಳ್ಳುತ್ತಾರೆ. ಒಂದು ವೇಳೆ ಈ ಮೊದಲಿನ ಧರ್ಮಕ್ಕೆ ಮತಾಂತರಗೊಂಡಲ್ಲಿ ಅದನ್ನು ಪುಷ್ಟೀಕರಿಸುವ ಪುರಾವೆ ತೋರಿಸಬೇಕು. ಪರಿಶಿಷ್ಟ ಜಾತಿಗೆ ನೀಡುವ ಪ್ರಯೋಜನಗಳನ್ನು ಪಡೆಯಬೇಕಾದಲ್ಲಿ ಆ ಜಾತಿ ಅವರನ್ನು ಮತ್ತೆ ಸ್ವೀಕರಿಸಿದೆ ಎಂಬ ಬಗ್ಗೆಯೂ ಬಲವಾದ ಸಾಕ್ಷ್ಯ ಒದಗಿಸಬೇಕು
* ಕ್ರೈಸ್ತ ಧರ್ಮಕ್ಕೆ ಮತಾಂತರವಾದ ನಂತರ ವ್ಯಕ್ತಿಯು ಅವರ ಈ ಮೊದಲಿನ ಜಾತಿಯನ್ನು ಕಳೆದುಕೊಳ್ಳುತ್ತಾರೆ. ಈ ಮೊದಲಿನ ಜಾತಿಯಿಂದ ಅವರನ್ನು ಗುರುತಿಸಲೂ ಸಾಧ್ಯ ಇಲ್ಲ
ಪ್ರಕರಣವೇನು?
ಸೆಲ್ವರಾಣಿ ಅವರ ತಂದೆ ಹಿಂದೂ ಧರ್ಮಕ್ಕೆ ಸೇರಿದವರಾದರೆ ತಾಯಿ ಕ್ರೈಸ್ತ ಧರ್ಮಕ್ಕೆ ಸೇರಿದವರು. ಸೆಲ್ವರಾಣಿ ಜನನದ ನಂತರ 'ಬ್ಯಾಪ್ಟಿಸಂ' ವಿಧಿಯನ್ನು ನೆರವೇರಿಸಲಾಗಿತ್ತು. ಸೆಲ್ವರಾಣಿ ತಂದೆ ವಲ್ಲುವನ್ ಜಾತಿಗೆ ಸೇರಿದವರಾಗಿದ್ದು ಇದು ಪರಿಶಿಷ್ಟ ಜಾತಿ ಅಡಿ ಬರುತ್ತದೆ. ನಂತರ ತಂದೆ ಕೂಡ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದು ಅದನ್ನು ದೃಢೀಕರಿಸುವ ದಾಖಲೆಗಳೂ ಇವೆ. 2015ರಲ್ಲಿ ಪುದುಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತೆ ಹುದ್ದೆಗೆ ಅರ್ಜಿ ಹಾಕಿದ್ದ ಸೆಲ್ವರಾಣಿ ತನಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಕೋರಿದ್ದರು.