ಭೋಪಾಲ್: 2002 ರ ಗೋಧ್ರಾ ರೈಲು ದುರಂತ ಘಟನೆಯನ್ನು ಆಧರಿಸಿದ 'ದಿ ಸಬರಮತಿ ರಿಪೋರ್ಟ್' ಸಿನಿಮಾಗೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ಮಂಗಳವಾರ ಘೋಷಿಸಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಈ ಕುರಿತು ಘೋಷಣೆ ಮಾಡಿದ್ದು, ಸಿನಿಮಾ ವೀಕ್ಷಿಸಲು ತಾನೂ ಹೋಗುವುದಾಗಿ ಹೇಳಿದ್ದಾರೆ.
ಧೀರಜ್ ಸರ್ನಾ ನಿರ್ದೇಶನದ ಈ ಚಿತ್ರವು ಗುಜರಾತ್‌ನಲ್ಲಿ ವ್ಯಾಪಕ ಕೋಮು ಗಲಭೆಗೆ ಕಾರಣವಾದ ಗೋಧ್ರಾ ರೈಲು ದುರಂತದ ಘಟನೆಗಳನ್ನು ಒಳಗೊಂಡಿದೆ.
"ದಿ ಸಬರಮತಿ ರಿಪೋರ್ಟ್' ತುಂಬಾ ಒಳ್ಳೆಯ ಸಿನಿಮಾ. ನಾನೇ ಸಿನಿಮಾ ನೋಡಲು ಹೋಗುತ್ತೇನೆ. ನನ್ನ ಸಚಿವರು, ಶಾಸಕರು, ಸಂಸದರಿಗೂ ಈ ಸಿನಿಮಾ ನೋಡುವಂತೆ ಹೇಳಿದ್ದೆ. ರಾಜ್ಯದಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ನೀಡುತ್ತೇವೆ. ಜನರು ಇದನ್ನು ವೀಕ್ಷಿಸಬಹುದು ಎಂದು ಯಾದವ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.